ಸಚಿವ ಸಂಪುಟ ಸಭೆ ಅಂತ್ಯ: ಹೈ-ಕ ಭಾಗಕ್ಕೆ 1 ಸಾವಿರ ಕೋಟಿ ಅನುದಾನ

ಶುಕ್ರವಾರ, 28 ನವೆಂಬರ್ 2014 (15:30 IST)
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಲ್ಲಿನ ಮಿನಿ ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಮಧ್ಯಾಹ್ನ 1.30ರ ವೇಳೆಗೆ ಮುಕ್ತಾಯಗೊಂಡಿದ್ದು, ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
 
ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಧಾರಗಳು:
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರ ಗೌರವ ಧನ ಹೆಚ್ಚಳದ ಸೇರಿದಂತೆ ಉಗ್ರರ ಗುಂಡೇಟಿಗೆ ಬಲಿಯಾಗಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ಬಂಡೆ ಅವರ ಪತ್ನಿಗೆ ಕಲ್ಬುರ್ಗಿಯಲ್ಲಿ ನಿವೇಶನ ನೀಡುವುದು ಹಾಗೂ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ. ಅನುದಾನ ನೀಡಲು ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಯಿತು. 
 
ಸಭೆಯಲ್ಲಿ ವಸತಿ ಸಚಿವ ಅಂಬರೀಶ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಸಂಪುಟ ಸದಸ್ಯರೂ ಕೂಡ ಭಾಗಿಯಾಗಿದ್ದರು.  

ರಾಜ್ಯ ಸಂಪುಟ ಸಭೆಯ ಬಳಿಕ ಮುಖ್ಬಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಈಗಾಗಲೇ 1000 ಕೋಟಿ ಸಭೆಯಲ್ಲಿ ಘೋಷಿಸಿತ್ತಾದರೂ ಹೆಚ್ಚುವರಿಯಾಗಿ 400 ಕೋಟಿ ಹಾಗೂ ರಾಜ್ಯದ ನೀರಾವರಿ ಯೋಜನೆಗಳಿಗಾಗಿ 5600 ಕೋಟಿ ಅನುದಾನ ನೀಡಲಾಗುವುದು. ಅಲ್ಲದೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು 2015ರ ಜೂನ್ ತಿಂಗಳ ಒಳಗೆ ನೇಮಕ ಮಾಡಿಕೊಂಡು ಸುಸೂತ್ರವಾಗಿ ಆಡಳಿತ ನಡೆಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂಬ ಭರವಸೆ ನೀಡಿದರು.  

ವೆಬ್ದುನಿಯಾವನ್ನು ಓದಿ