ಶಿವಮೊಗ್ಗದಲ್ಲಿ ಉದ್ವಿಗ್ನ ಸ್ಥಿತಿ: ಸಚಿವ ಜಾರ್ಜ್ ಭೇಟಿ

ಶನಿವಾರ, 21 ಫೆಬ್ರವರಿ 2015 (17:09 IST)
ಎರಡು ಸಂಘಟನೆಗಳ ನಡುವೆ ಘರ್ಷಣೆ ಸಂಭವಿಸಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರಾದ್ಯಂತ ನಿಷೇಧಾಜ್ಞೆ ಜಾರಿಗೊಳಿಲಾಗಿದ್ದು, ಇಂದು ಗೃಹ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಅವರು ಭೇಟಿ ನೀಡಿ ಜಿಲ್ಲೆಯ ಉನ್ನತ ಅಧಿಕಾರಿಗಳು ಹಾಗೂ ಧಾರ್ಮಿಕ ಮುಖಂಡರ ಜೊತೆ ಸಭೆ ನಡೆಸಿದರು. 
 
ನಗರಕ್ಕೆ ಭೇಟಿ ನೀಡಿದ ಬಳಿಕವೇ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಚಿವರು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿದರು. ಈ ವೇಳೆ ಮುಖಂಡರಿಂದ ಹಲವಾರು ಮಾಹಿತಿಗಳನ್ನು ಪಡೆದರು. ಬಳಿಕ ನಗರದಲ್ಲಿ ಶಾಂತಿ ನೆಲೆಸಲು ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. 
 
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಸಾಕಷ್ಟು ಹಾನಿಯಾಗಿದ್ದು, ಆ ಬಗ್ಗೆ ಸಾರ್ವಜನಿಕರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯನವರು 50 ಲಕ್ಷ ಬಿಡುಗಡೆ ಮಾಡಿದ್ದು, ಎಲ್ಲವನ್ನೂ ಯಥಾ ಸ್ಥಿತಗೆ ತರಲಾಗುವುದು ಎಂದರು. 
 
ಇದೇ ವೇಳೆ, ಘರ್ಷಣೆ ಸಂಭವಿಸಿದ ವೇಳೆ ವಿಶ್ವನಾಥ್ ಹಾಗೂ ಇಂದು ನಿಷೇಧಾಜ್ಞೆ ಹೇರಿರುವಾಗಲೇ ಮಂಜುನಾಥ್ ಎಂಬ ಬಾರ್ ಉದ್ಯೋಗಿ ಸೇರಿ ಇಬ್ಬರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸಾವನ್ನಪ್ಪಿದವರ ಕುಟುಂಬದ ನಿವಾಸಗಳಿಗೆ ತೆರಳಿದ ಸಚಿವರು, ಸಾಂತ್ವನ ಹೇಳಿದರು. ಅಲ್ಲದೆ ಸರ್ಕಾರದಿಂದ ಸರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳೂ ಕೂಡ ನಗರದಲ್ಲಿಯೇ ಬೀಡು ಬಿಡಲಿದ್ದಾರೆ ಎಂದರು.

ಕೊನೆಯಲ್ಲಿ ಸಂಘಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಲವು ಯುವಕರು, ಘರ್ಷಣೆಗೆ ಸಿಲುಕಿ ಗಾಯಗೊಂಡು ಬಳಿಕ ನಗರದ ಮೆಗ್ಗಾನ್ ಆಸ್ಪತ್ರೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೂ ಭೇಟಿ ನೀಡಿದ ಜಾರ್ಜ್, ಯುವಕರ ಆರೋಗ್ಯದ ಬಗ್ಗೆ ವಿಚಾರಿಸಿದರು. 

ವೆಬ್ದುನಿಯಾವನ್ನು ಓದಿ