ಶೂಟೌಟ್ ಪ್ರಕರಣ: ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು

ಗುರುವಾರ, 2 ಏಪ್ರಿಲ್ 2015 (12:54 IST)
ವಿದ್ಯಾರ್ಥಿನಿ ಶೂಟೌಟ್ ಪ್ರಕರಣದ ಬಂಧಿತ ಆರೋಪಿ ಮಹೇಶ್.ಕೆ ಅವರನ್ನು ಇಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. 
 
ಆರೋಪಿಯನ್ನು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲಿರುವ ಪೊಲೀಸರು, ಹೆಚ್ಚಿನ ತನಿಖೆ ನಡೆಸುವ ಸಲುವಾಗಿ ನ್ಯಾಯಾಧೀಶರಿಂದ ಅನುಮತಿ ಪಡೆದು ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ. ಆ ಬಳಿಕ ಆರೋಪಿಯನ್ನು ಘಟನೆ ನಡೆದಿದ್ದ ನಗರದ ಕಾಡುಗೋಡಿಯಲ್ಲಿನ ಪ್ರಗತಿ ಕಾಲೇಜಿಗೆ ಕರೆದೊಯ್ದು ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.  

ನಿನ್ನೆ ಮಧ್ಯಾಹ್ನ ಬಂಧಿಸಿದ್ದ ಪೊಲೀಸರು ಸ್ವಲ್ಪ ಮಟ್ಟಿನ ತನಿಖೆ ನಡೆಸಿದ್ದು, ಪ್ರಕರಣದ ಪ್ರಮುಖ ವಿಷಯವಾಗಿರುವ ಪಿಸ್ತೂಲ್‌ನನ್ನು ಎಲ್ಲಿಂದ ತಂದೆ ಎಂದು ಆರೋಪಿಯನ್ನು ಪೊಲೀಸರು ಪ್ರಶ್ನಿಸಿದ್ದು, ನಗರದ ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೋರ್ವರಿಂದ ಕಳೆದ ಎರಡು ವರ್ಷಗಳ ಹಿಂದೆಯೇ ಖರೀದಿಸಿದ್ದೆ ಎಂದು ಬಾಯಿ ಬಿಟ್ಟಿದ್ದಾನೆ. ಆದರೆ ಯಾವ ಕಾರಣಕ್ಕೆ ಖರೀದಿಸಿದೆ ಎಂಬ ಬಗ್ಗೆ ಆತ ಉತ್ತರಿಸಿಲ್ಲ ಎನ್ನಲಾಗಿದೆ.  
 
ನಗರದ ಕಾಡುಗೋಡಿಯಲ್ಲಿರುವ ಪ್ರಗತಿ ಕಾಲೇಜಿನ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆರೋಪಿ ಮಹೇಶ್, ಪಾವಗಡ ಮೂಲದ ಪಿಯುಸಿ ವಿದ್ಯಾರ್ಥಿನಿ ಗೌತಮಿ(18) ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದ. ಅಲ್ಲದೆ ಮೃತ ವಿದ್ಯಾರ್ಥಿನಿಯ ಸ್ನೇಹಿತೆ ಶಿರಿಷಾ(18) ಮೇಲೂ ಗುಂಡು ಹಾರಿಸಿ ದ್ದ ಆರೋಪಿ ಆಕೆಯನ್ನು ಗಂಭೀರವಾಗಿ ಗಾಯಗೊಳಿಸಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಈ ಇಬ್ಬರೂ ವಿದ್ಯಾರ್ಥಿನಿಯರು ಕಾಲೇಜಿನ ವಸತಿ ಶಾಲೆಯಲ್ಲಿಯೇ ತಂಗಿದ್ದರು. ಘಟನೆಯು ಮಾರ್ಚ್ 31ರ ರಾತ್ರಿ ನಡೆದಿತ್ತು. ಆರೋಪಿ ಮಹೇಶ್‌ನನ್ನು ನಿನ್ನೆ ಬಂಧಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ