ಶ್ರೀನಿವಾಸ್ ಪ್ರಸಾದ್ ಕೇವಲ ರಾಜ್ಯ ನಾಯಕರಲ್ಲ, ರಾಷ್ಟ್ರ ನಾಯಕರು: ಬಿಜೆಪಿ

ಭಾನುವಾರ, 16 ಅಕ್ಟೋಬರ್ 2016 (15:15 IST)
ವಿ. ಶ್ರೀನಿವಾಸ್ ಪ್ರಸಾದ್ ಕೇವಲ ರಾಜ್ಯ ನಾಯಕರಲ್ಲ, ರಾಷ್ಟ್ರ ನಾಯಕರು ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ  ಡಿ.ಎಸ್. ವೀರಯ್ಯ ಹೇಳಿದ್ದಾರೆ.
 
ಕಾಂಗ್ರೆಸ್ ತ್ಯಜಿಸುತ್ತಿರುವ ಹಿರಿಯ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನವಾಗಿ ಇಂದು ಅವರು ಮೈಸೂರಿಗೆ ಆಗಮಿಸಿದ್ದರು.
 
ಪ್ರಸಾದ್ ಅವರ ಜತೆ ಮಾತುಕತೆ ನಡೆಸಿ ವರದಿಗಾರರೊಂದಿಗೆ ಮಾತನ್ನಾಡುತ್ತಿದ್ದ ಅವರು, ಒಂದು ಸಮುದಾಯಕ್ಕೆ ಸೀಮತರಾದವರಲ್ಲ ಪ್ರಸಾದ್, ಎಲ್ಲ ಸಮುದಾಯದವರ ಜತೆ ಒಡನಾಟ ಇಟ್ಟುಕೊಂಡಿದ್ದಾರೆ. ಅವರು ಕೇವಲ ರಾಜ್ಯ ನಾಯಕರಲ್ಲ, ರಾಷ್ಟ್ರ ನಾಯಕರು. ಕಾಂಗ್ರೆಸ್ ಅವರನ್ನು ತಿರಸ್ಕಾರ ಮಾಡಿದೆ. ಪ್ರಸಾದ್, ಬಿಜೆಪಿ ಸೇರಿದರೆ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ. ಅವರಿಗೆ ಸದಾ ಸ್ವಾಗತ. ನಮ್ಮ ಪಕ್ಷದ ಹಿರಿಯ ನಾಯಕರು ಅವರ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ .
 
ಪ್ರಸಾದ್ 'ಕೈ' ಬಿಡುತ್ತಿದ್ದಾರೆ ಎಂಬ ಸಂಗತಿ ಹೊರ ಬರುತ್ತಿದ್ದಂತೆ ಅವರ ನಿವಾಸವೀಗ ರಾಜಕೀಯ ಬೆಳವಣಿಗೆಯ ತಾಣವಾಗಿ ಬದಲಾಗಿದೆ. ಜೆಡಿಎಸ್, ಬಿಜೆಪಿ ಅವರನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ರಾಜಕೀಯ ಕಸರತ್ತು ನಡೆಸುತ್ತಿದ್ದು ಪ್ರಸಾದ್ ಯಾವ ಪಕ್ಷದ ತೆಕ್ಕೆಗೆ ಸೇರುತ್ತಾರೆ ಎಂಬುದು ಸದ್ಯದಲ್ಲೇ ಬಹಿರಂಗವಾಗಲಿದೆ. ನಿನ್ನೆ ಸ್ಥಳೀಯ ಮುಖಂಡ ಪ್ರತಾಪ್ ಸಿಂಹ ಮತ್ತು ಬಿಜೆಪಿ ಇತರ ನಾಯಕರ ನಿಯೋಗ ಪ್ರಸಾದ್ ಅವರನ್ನು ಭೇಟಿಯಾದ ಮುಂದುವರೆದ ಭಾಗವಾಗಿ ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ನೇತೃತ್ವದ ನಿಯೋಗ ಕೂಡ ಕೈ ನಾಯಕನ ಜತೆ ಮಾತುಕತೆ ನಡೆಸಿತು.
 
ನಾಳೆ 12 ಗಂಟೆಗೆ ಸಭಾಪತಿ ಕೆ.ಬಿ. ಕೋಳವಾಡ ಅವರನ್ನು ಭೇಟಿಯಾಗಿ ಶಾಸಕ ರಾಜೀನಾಮೆ ಸಲ್ಲಿಸುತ್ತೇನೆ. ಬಳಿಕ ಕಾಂಗ್ರೆಸ್ ಪಕ್ಷಕ್ಕೂ ಗುಡ್ ಬೈ ಹೇಳುತ್ತೇನೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ ಮತ್ತೆ ಸ್ಪಷ್ಟಪಡಿಸಿದ್ದಾರೆ. 
 
ಪಕ್ಷ ತೊರೆದ ನಂತರ, ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಡೆಯನ್ನಿಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ