ತಾಳೆಎಣ್ಣೆಯಲ್ಲಿ ಸಿದ್ದರಾಮಯ್ಯ-ಗುಂಡೂರಾವ್ ಭಾವಚಿತ್ರ: ದೂರು ನೀಡಿದ ಶಾಸಕ ಸುರೇಶ್ ಕುಮಾರ್

ಮಂಗಳವಾರ, 4 ಆಗಸ್ಟ್ 2015 (18:08 IST)
ಸರ್ಕಾರ ವಿತರಿಸುತ್ತಿರುವ ತಾಳೆಎಣ್ಣೆ ಮತ್ತು ಉಪ್ಪಿನ ಪಾಕೆಟ್ ಮೇಲೆ ಮುಖ್ಯಮಂತ್ರಿಗಳ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರ ಭಾವಚಿತ್ರ ಮುದ್ರಿತವಾಗುತ್ತಿದ್ದು, ಅದನ್ನು ರದ್ದುಗೊಳಿಸಬೇಕೆಂದು ಕೋರಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದಾರೆ. 
 
ನಗರದ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಅವರು, ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಪಿ.ಶ್ರೀನಿವಾಸಾಚಾರಿ ಅವರನ್ನು ಭೇಟಿ ಮಾಡಿದರು. ಈ ವೇಳೆ ತಾಳೆಎಣ್ಣೆ ಹಾಗೂ ಉಪ್ಪಿನ ಪಾಕೆಟ್‌ಗಳ ಸಮೇತರಾಗಿ ಬಂದಿದ್ದ ಅವರು, ಅವುಗಳನ್ನು ಚುನಾವಣಾ ಆಯುಕ್ತರಿಗೆ ತೋರಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ದಿನೇಶ್ ಗುಂಡೂರಾವ್ ಅವರ ಭಾಚಿತ್ರವನ್ನು ಮುದ್ರಿಸದಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿಕೊಂಡರು.   
 
ಇನ್ನು ಇತ್ತೀಚೆಗೆ ಜಾಹೀರಾತು ಪ್ರಕಟಣೆ ಸಂಬಂಧ ತೀರ್ಪಿತ್ತಿದ್ದ ಸುಪ್ರೀಂ ಕೋರ್ಟ್, ಪ್ರಧಾನ ಮಂತ್ರಿ ಹಾಗೂ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನು ಹೊರತುಪಡಿಸಿ ಮುಖ್ಯಮಂತ್ರಿಯನ್ನೂ ಒಳಗೊಂಡಂತೆ ಯಾವುದೇ ರೀತಿಯಾಗಿ ಇತರೆ ಜನಪ್ರತಿನಿಧಿ ಅಥವಾ ನಾಯಕರ ಭಾವಚಿತ್ರಗಳನ್ನು ಸರ್ಕಾರಿ ಜಾಹೀರಾತುಗಳಲ್ಲಿ ಪ್ರಕಟಿಸಬಾರದು ಎಂದು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು ಇಂದು ಸಿಎಂ ವಿರುದ್ಧ ದೂರು ನೀಡಿದ್ದರು. 

ವೆಬ್ದುನಿಯಾವನ್ನು ಓದಿ