ಇಂದಿನಿಂದ ರೈತನ ಪಾಲಿಗೆ ಅಕ್ಷಯ ಪಾತ್ರೆಯಾದ ಸಿದ್ದರಾಮಯ್ಯ

ಶನಿವಾರ, 10 ಅಕ್ಟೋಬರ್ 2015 (14:51 IST)
ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಜಿಲ್ಲೆಯ ಗುಡುಗೂರಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ಬಹಿರಂಗ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಸಾಲಬಾಧೆ ಹಾಗೂ ಇನ್ನಿತರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಸ್ಥರಿಗೆ ಇನ್ನುಮುಂದೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. 
 
ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರೈತರು ಇಲ್ಲಿಯವರೆಗೆ ಮಾಡಿರುವ ಸಾಲದ ಮೇಲೆ ಈ ವರ್ಷದವರೆಗೆ ಬಂದಿದ್ದ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಎಲ್ಲವನ್ನೂ ಕೂಡ ಮನ್ನಾ ಮಾಡಿದ್ದು, ಸಂಪೂರ್ಣ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಕಳೆದ ಒಂದು ವಾರದ ಹಿಂದಷ್ಟೇ ಮಧ್ಯಮಾವಧಿ, ದೀರ್ಘಾವಧಿಯ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದೆವು ಎಂದ ಅವರು, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಈ ಹಿಂದೆ ಅಂದರೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ 1 ಲಕ್ಷ ರೂ., ನಮ್ಮ ಸರ್ಕಾರ ಬಂದ ಮೇಲೆ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಆದರೆ ಅದನ್ನು ಪ್ರಸ್ತುತ ಪರಿಷ್ಕರಿಸಿದ್ದು, ಪರಿಹಾರದ ಮೊತ್ತವನ್ನು 2 ಲಕ್ಷದಿಂದ 5 ಲಕ್ಷದ ವರೆಗೆ ಏರಿಕೆ ಮಾಡಿದ್ದೇವೆ. ಇದು ಭೂ ರಹಿತ ಕೃಷಿ ಕಾರ್ಮಿಕರಿಗೂ ಅನ್ವಯವಾಗಲಿದ್ದು, ನ.1ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದರು. 
 
ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಸ್ನಾತಕೋತ್ತರ ಪದವಿ ವರೆಗೂ ಕೂಡ ಸರ್ಕಾರವೇ ವಿದ್ಯಾಭ್ಯಸಕ್ಕೆ ತಗುಲುವ ಎಲ್ಲಾ ಖರ್ಚು ವೆಚ್ಚವನ್ನು ಭರಿಸಲಿದೆ ಎಂದ ಘೋಷಿಸಿದ ಅವರು, ಮೃತರ ಪತ್ನಿಯರಿಗೆ ಮಾಸಿಕವಾಗಿ 2000 ರೂ. ವಿಧವಾ ಮಾಸಾಶನ ನೀಡಲಾಗುವುದು. ಇದರ ಜೊತೆಗೆ ಆರೋಗ್ಯ ರಕ್ಷಣೆಗಾಗಿ ಕುಟುಂಬದ ಎಲ್ಲಾ ಸದಸ್ಯರಿಗೆ ಆರೋಗ್ಯ ವಿಮೆ ಮಾಡಿಕೊಡಲಾಗುವುದು. ಅದನ್ನು ಬಳಸಿಕೊಂಡು ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು. 
 
ಬಿಜೆಪಿ ನಾಯಕರ ಹೇಳಿಕೆಗಳಿಗೆ ಕಿವಿಗೊಡಬೇಡಿ ಎಂದು ಗರಂ ಆದ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿದೆ. ರೈತರಿಗಾಗಿ ಅನೇಕ ಕಾರ್ಯಕ್ರಮ ಜಾರಿಗೊಳಿಸಿದ್ದೇವೆ, ಸಹಕಾರ ಸಂಘಗಳು ಹಾಗೂ ಬ್ಯಾಂಕ್‌ಗಳ ಮೂಲಕ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಿದ್ದೇವೆ. ಇನ್ನುಮುಂದೆಯೂ ಕೂಡ 3-10 ಲಕ್ಷದವರೆಗೆ ಮಧ್ಯಮಾವಧಿ, ಧೀರ್ಘಾವಧಿ ಸಾಲವನ್ನು ವಿತರಿಸಲಿದ್ದೇವೆ ಎಂದರು. 
 
ಒಂದು ಲೀಟರ್ ಹಾಲಿಗೆ 4 ರೂ ಸಬ್ಸೀಡಿ ನೀಡಲು ನಿರ್ಧರಿಸಿದ್ದು, ಇದಕ್ಕಾಗಿ 900 ಕೋಟಿ ಮೀಸಲಿಟ್ಟಿದ್ದೇವೆ. ಅಲ್ಲದೆ ಹನಿ ನೀರಾವರಿ ಯೋಜನೆ ಮಾಡುವ ರೈತರಿಗೆ ಶೇ. 90ರಷ್ಟು ಸಬ್ಸಿಡಿ ನೀಡಲಾಗುವುದು ಎಂದರು.  
 
ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಭೆಗಳ ಮೂಲಕ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಮಿತಿ ರಚಿಸಿದ್ದು, ಆತ್ಮಹತ್ಯೆ ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಅಲ್ಲದೆ ಈಗಾಗಲೇ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದ್ದು, ಈ ವರ್ಷಾಂತ್ಯ ಮುಗಿಯುವವರೆಗೆ ಸಾಲ ವಸೂಲಿ ಮಾಡಂತೆ ಸೂಚಿಸಿದ್ದೇವೆ ಎಂದರು.  

ವೆಬ್ದುನಿಯಾವನ್ನು ಓದಿ