ಸಿದ್ದರಾಮಯ್ಯನವರು ಸಾಲ ಭಾಗ್ಯವನ್ನೂ ಕರುಣಿಸಿದ್ದಾರೆ: ಶೆಟ್ಟರ್ ಲೇವಡಿ

ಮಂಗಳವಾರ, 24 ಮಾರ್ಚ್ 2015 (14:01 IST)
ಸರ್ಕಾರವು ಇಂದು ಮಂಡಿಸಿದ 4700.49 ಕೋಟಿ ಪೂರಕ ಅಂದಾಜಿಗೆ ವಿಧಾನಸಭಾ ಸದಸ್ಯರು ಒಪ್ಪಿಗೆ ನೀಡಿದ್ದಾರೆ. ಇದು ಒಂದು ಕಡೆಯಾದರೆ ಸರ್ಕಾರ ಮಾಡುತ್ತಿರುವ ಸಾಲವನ್ನು ಟೀಕಿಸಿರುವ ವಿಧಾನಸಭಾ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಬಜೆಟ್ ಭಾಗ್ಯದ ಜೊತೆಗೆ ಸಾಲದ ಭಾಗ್ಯವನ್ನೂ ಕರಣಿಸಿದ್ದಾರೆ ಎಂದು ಲೇವಡಿ ಮಾಡಿದರು.  
 
ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಶೆಟ್ಟರ್, ಸಿದ್ದರಾಮಯ್ಯನವರ ಮಾತಿನಲ್ಲಿ ಹೇಳಬೇಕಾದರೆ ಇದನ್ನು ಬಜೆಟ್ ಭಾಗ್ಯ ಎನ್ನಬಹುದು. ಸಿಎಂ ಈ ಹಿಂದೆ ವಿರೋಧ ಪಕ್ಷ ಸದಸ್ಯರಾಗಿದ್ದ ವೇಳೆ ಸಾಲವನ್ನು ಮಾಡಿ ಸರ್ಕಾರ ನಡೆಸಬೇಡಿ ಎಂದು ಪದೇ ಪದೇ ನಮ್ಮ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಇಂದಿನ ಸರ್ಕಾರ ಒಟ್ಟು 1,80,815 ಕೋಟಿ ಸಾಲ ಮಾಡಿದೆ ಎಂದರು.  
 
ನಮ್ಮ ಬಿಜೆಪಿ ಸರ್ಕಾರವು ಈ ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಆ ಐದು ವರ್ಷಗಳ ಅವಧಿಯಲ್ಲಿ 45,120 ಕೋಟಿ ಮಾತ್ರ ಸಾಲ ಮಾಡಿತ್ತು. ಆದರೆ, ಪ್ರಸ್ತುತ ಸಿದ್ದರಾಮಯ್ಯನವರ ಸರ್ಕಾರ ಕೇವಲ 2 ವರ್ಷದ ಅವಧಿಯಲ್ಲಿ 42,329 ಕೋಟಿ ಸಾಲ ಮಾಡಿದೆ. ಈ ಮೂಲಕ ಹಣಕಾಸು ಸಚಿವರಾಗಿ ಅನುಭವವಿರುವ ಸಿದ್ದರಾಮಯ್ಯನವರು ಸಾಲದ ಭಾಗ್ಯವನ್ನು ನೀಡಿದ್ದಾರೆ ಎಂದು ಲೇವಡಿ ಮಾಡಿದರು.

ವೆಬ್ದುನಿಯಾವನ್ನು ಓದಿ