ಶಿಕ್ಷಕರ ದಿನಾಚರಣೆ ಹಿನ್ನೆಲೆ ನೆಚ್ಚಿನ ಮೇಷ್ಟ್ರನ್ನು ನೆನೆದ ಸಿಎಂ ಸಿದ್ದರಾಮಯ್ಯ

ಶನಿವಾರ, 5 ಸೆಪ್ಟಂಬರ್ 2015 (12:43 IST)
ಇಂದು ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಶಿಕ್ಷಕ ವೃಂದಕ್ಕೆ ಶುಭಾಷಯ ತಿಳಿಸಿದ್ದು, ಈ ವೇಳೆ ತಮ್ಮನ್ನು ನೇರವಾಗಿ 5ನೇ ತರಗತಿಗೆ ಸೇರಿಸಿಕೊಂಡಿದ್ದ ಮೇಷ್ಟ್ರು ರಾಜಪ್ಪ ಅವರನ್ನು ನೆನಪಿಸಿಕೊಂಡರು.  
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಸ್ಥಾನದ ವರೆಗೆ ಬಂದಿದ್ದೇನೆ ಎಂದರೆ ಅದಕ್ಕೆ ಕಾರಣ ನಮ್ಮ ಮನೆಗೇ ಬಂದು ನನ್ನನ್ನು ನೇರವಾಗಿ 5ನೇ ತರಗತಿಗೆ ಸೇರಿಸಿಕೊಂಡಿದ್ದ ಮೇಷ್ಟ್ರು ರಾಜಪ್ಪನವರು. ಅವರು ನಮ್ಮ ಮನೆ ಬಳಿ ಬರದೇ ಇದ್ದಿದ್ದಲ್ಲಿ ನಾನು ಇಲ್ಲಿಯವರೆಗೆ ಯಾವ ಯಾವ ಹುದ್ದೆಗಳನ್ನು ಅಲಂಕರಿಸಿದ್ದೇನೋ ಅವೆಲ್ಲವೂ ಸಾಧ್ಯವಾಗುತ್ತಲೇ ಇರಲಿಲ್ಲ ಎನ್ನುವ ಮೂಲಕ ಸ್ಮರಿಸಿಕೊಂಡರು. ಮೇಷ್ಟ್ರು ರಾಜಪ್ಪ ಅವರೊಂದಿಗೆ ತಾವು ಈಗಲೂ ಸಂಪರ್ಕದಲ್ಲಿದ್ದೀರಾ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ  ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ ಅವರು ಈಗಾಗಲೇ ಕಾಲವಾಗಿದ್ದಾರೆ ಎಂದರು.    
 
ಇದೇ ವೇಳೆ, ರಾಜ್ಯ ಕಬ್ಬು ಬೆಳೆಗಾರರ ಸಂಘವು ಇಂದು ಬಂದ್ ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕಬ್ಬು ಬೆಳೆಗಾರರು ಬಂದ್ ಘೋಷಿಸುವ ಅಗತ್ಯವಿರಲಿಲ್ಲ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಂದ್ ಘೋಷಿಸಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತದೆ. ಅಲ್ಲದೆ ರಾಜ್ಯದಲ್ಲಿ ಬಂದ್‌ಗೆ ಕರೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎನ್ನುವ ಮೂಲಕ ಬಂದ್ ಬಗ್ಗೆ ಬೇಸರ ವ್ಯಕ್ತಪಡಿಸಿದರು. 
 
ಬಳಿಕ ಬಿಬಿಎಂಪಿಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನಾನು ಗಮನ ಹರಿಸುವುದಿಲ್ಲ. ಏಕೆಂದರೆ ಆ ಬಗ್ಗೆ ಪಕ್ಷದ ಇತರೆ ನಾಯಕರು ಹಾಗೂ ಸ್ಥಳೀಯ ನಾಯಕರು ಗಮನ ಹರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು. 

ವೆಬ್ದುನಿಯಾವನ್ನು ಓದಿ