ಸಿದ್ದರಾಮಯ್ಯ ಕಾರ್ಯವೈಖರಿಗೆ ದಿಗ್ವಿಜಯ್ ಸಿಂಗ್ ಶ್ಲಾಘನೆ

ಭಾನುವಾರ, 25 ಜನವರಿ 2015 (14:46 IST)
ಅರ್ಕಾವತಿ ಡಿ-ನೋಟಿಫಿಕಷೇನ್‌ ಪ್ರಕರಣದಲ್ಲಿ ದೂರು ಬಂದ ಕೂಡಲೇ ಈ ಬಗ್ಗೆ ತನಿಖೆ ನಡೆಸಲು ಆಯೋಗವೊಂದನ್ನು ರಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮವನ್ನು ಶ್ಲಾ ಸಿದ ದಿಗ್ವಿಜಯ್‌ಸಿಂಗ್‌, ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ ನ್ಯಾಯೋಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಿದರು.
 
ಅರ್ಕಾವತಿ ಡಿ-ನೋಟಿಫಿಕೇಷನ್‌ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಪ್ರೇರಿತ ಆರೋಪ ಮಾಡುತ್ತಿರುವುದು ತಮ್ಮ ಗಮನಕ್ಕೂ ಬಂದಿದೆ. ಆದರೆ, ಸಿದ್ದರಾಮಯ್ಯ ಅವರು ಹಿಂದಿನ ಸರ್ಕಾರಗಳಂತೆ ಬೇಕಾಬಿಟ್ಟಿ ಡಿ-ನೋಟಿಫಿಕೇಷನ್‌ ನಡೆಸಲು ಅವಕಾಶ ನೀಡಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನ್ಯಾಯಾಲಯ ನೀಡಿದ ಆರು ಮಾನದಂಡಗಳ ಪಾಲನೆಯಷ್ಟೇ ಆಗಿದೆ. ನ್ಯಾಯಾಲಯದ ಆದೇಶದಂತೆ ನಾಲ್ಕು ಮಂದಿ ಭೂ ಸ್ವಾಧೀನಾಧಿಕಾರಿಗಳಿಗೆ ಕ್ವಾಸಿ ಜ್ಯುಡಿಷಿಯಲ್‌ ಅಧಿಕಾರ ನೀಡಲಾಗಿತ್ತು. ಯಾವುದೇ ನಿರ್ಧಾರವಾಗಿದ್ದರೂ ಅದನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಯಾರಿಗೂ ನಿರ್ದೇಶನ ನೀಡಿಲ್ಲ ಹಾಗೂ ಮಧ್ಯಪ್ರವೇಶ ಮಾಡಿಲ್ಲ. ಇಷ್ಟಾಗಿಯೂ ಯಾವುದೇ ಪ್ರಕರಣದಲ್ಲಿ ಕೆಲವರಿಗೆ ಅನುಕೂಲ ಮಾಡಿಕೊಡಲು ಕಾನೂನಿಗೆ ವಿರುದ್ಧ ಕ್ರಮಗಳು ನಡೆದಿದೆ ಎನಿಸಿದರೆ, ಅಥವಾ ದಾಖಲೆಗಳಿದ್ದರೆ ಅದರ ಆದಾರದ ಮೇಲೆ ಈ ಕುರಿತು ನೇಮಿಸಲಾಗಿರುವ ಆಯೋಗಕ್ಕೆ ದೂರು ಸಲ್ಲಿಸುವ ಅವಕಾಶವಿತ್ತು. ಅಲ್ಲಿ ದೂರು ಕೊಡಬಹುದಿತ್ತು. ಆದರೆ, ಇಂತಹ ಯಾವುದೇ ದಾಖಲೆಗಳು ಇಲ್ಲದ ಕಾರಣ ಪ್ರತಿಪಕ್ಷಗಳು ಕೇವಲ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಅವರು ಆರೋಪಿಸಿದರು.
 
ದಾಖಲೆ ತಿದ್ದುವ ಕೆಲಸ ಎಚ್‌ಡಿಕೆಗೆ ಕರಗತ'
 
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನೋಟಿಫಿಕೇಷನ್‌ ದಾಖಲೆಗಳನ್ನು ತಿದ್ದುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಡಿರುವ ಆರೋಪ ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ದಾಖಲೆಗಳನ್ನು ತಿದ್ದುವ ಕಲೆ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕರಗತವಾಗಿದೆ. ಸಿದ್ದರಾಮಯ್ಯ ದಾಖಲೆ ತಿದ್ದುವಂತಹ ನೀಚ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
 
ಸಿದ್ದುಗೆ ದಿಗ್ವಿಜಯ್‌ ಸಿಂಗ್‌ "ಅರ್ಕಾವತಿ ವಿವರಣೆ'
 
ಅರ್ಕಾವತಿ ಡಿ-ನೋಟಿಫಿಕೇಷನ್‌ನಲ್ಲಿ ಭಾರಿ ಹಗರಣ ನಡೆದಿದೆ ಎಂದು ಪ್ರತಿಪಕ್ಷಗಳು ಬಿಂಬಿಸುತ್ತಿರುವ ಈ ಹಂತದಲ್ಲಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ದಿಗ್ವಿಜಯ್‌ಸಿಂಗ್‌ ಹಠಾತ್ತನೇ ನಗರಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸುದೀರ್ಘ‌ ಸಭೆ ನಡೆಸಿದ್ದು, ಕುತೂಹಲ ಮೂಡಿಸಿದೆ.
 
ಖಾಸಗಿ ಕಾರ್ಯಕ್ರಮದ ಅಂಗವಾಗಿ ನಗರಕ್ಕೆ ಆಗಮಿಸಲಿರುವ ದಿಗ್ವಿಜಯ ಸಿಂಗ್‌ ಅನಂತರ ಕೇರಳಕ್ಕೆ ತೆರಳುವರು ಎಂದು ಹೇಳಲಾಗಿತ್ತು. ಆದರೆ, ತಮ್ಮ ಪ್ರವಾಸವನ್ನು ಮೊಟಕುಗೊಳಿಸಿದ ಅವರು ಇಡೀ ದಿನ ನಗರದಲ್ಲೇ ತಂಗಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೊಂದಿಗೆ ಸಭೆ ನಡೆಸಿದರು. ಅಲ್ಲದೆ, ಸಂಜೆ ಪತ್ರಿಕಾಗೋಷ್ಠಿ ನಡೆಸಿ ಅರ್ಕಾವತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮಗಳನ್ನು ಬಲವಾಗಿ ಸಮರ್ಥಿಸಿಕೊಂಡರು.
 
ಇದಕ್ಕೂ ಮುನ್ನ  ಬೆಳಿಗ್ಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್‌ ಅವರೊಂದಿಗೆ ಸುದೀರ್ಘ‌ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅರ್ಕಾವತಿ ಡಿ-ನೋಟಿಫಿಕೇಷನ್‌ಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸಿಎಂ ದಿಗ್ವಿಜಯ್‌ಸಿಂಗ್‌ ಅವರು ಮಾಹಿತಿ ಪಡೆದರು ಎನ್ನಲಾಗಿದೆ.
 
ಈ ಸಂದರ್ಭದಲ್ಲಿ ಸಿಎಂ ಅವರು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳು ಹಾಗೂ ಅದಕ್ಕೆ ತಮ್ಮ ಸಮಜಾಯಿಷಿ ನೀಡಿದ್ದಲ್ಲದೆ, ಯಾವ ಸಂದರ್ಭದಲ್ಲಿ ಹಾಗೂ ಯಾವ ಕಾರಣಕ್ಕೆ ಅರ್ಕಾವತಿ ಪರಿಷ್ಕೃತ ಯೋಜನೆಗೆ ಸಹಿ ಹಾಕಬೇಕಾಯಿತು ಎಂಬುದನ್ನು ವಿವರಿಸಿದರು ಎಂದು ತಿಳಿದುಬಂದಿದೆ.
 
ಪ್ರತಿಪಕ್ಷಗಳು ಆರೋಪಿಸಿದಂತೆ ತಾವು ಡಿ-ನೋಟಿಫಿಕೇಷನ್‌ ನಡೆಸಿಲ್ಲ. ಬಿಡಿಎ ಮಂಡಿಸಿದ ಅರ್ಕಾವತಿ ಪರಿಷ್ಕೃತ ಯೋಜನೆಗೆ ಸಹಿ ಹಾಕಿದ್ದೇನೆ. ಉಚ್ಚ ನ್ಯಾಯಾಲಯ ನೀಡಿದ ಆರು ಮಾರ್ಗಸೂಚಿ ಅಡಿ ಬಿಡಿಎ 2005ರ ಮೇ 31ರಂದು 140 ಎಕರೆ ಹಾಗೂ 32 ಗುಂಟೆ ಜಮೀನು ಸ್ವಾಧೀನದಿಂದ ಕೈ ಬಿಟ್ಟು ಉಳಿದ ಜಮೀನನ್ನು ಸ್ವಾಧೀನದಲ್ಲೇ ಮುಂದುವರೆಸುವಂತೆ ತೀರ್ಮಾನಿಸಿತ್ತು. ಆದರೆ, ಇದನ್ನು ಇತರೆ ಭೂ ಮಾಲಿಕರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಇದಕ್ಕೆ ನ್ಯಾಯಾಲಯವು ಅರ್ಜಿದಾರರ ಅಹವಾಲು ಪರಿಗಣಿಸಿ ಬಿಡಿಎಯ ಭೂಸ್ವಾಧೀನಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೀ-ಡೂ ಪ್ರಕ್ರಿಯೆಯನ್ನು ನಡೆಸುವಂತೆ ಸೂಚಿಸಿತ್ತು. ಇದರ ಆಧಾರದ ಮೇಲೆ ಬಿಜೆಪಿ ಸರ್ಕಾರವೇ ನಾಲ್ಕು ಮಂದಿ ಭೂಸ್ವಾಧೀನಾಧಿಕಾರಗಳನ್ನು ನೇಮಕ ಮಾಡಿ ಡಿ-ನೋಟಿಫಿಕೇಷನ್‌ ಬಗ್ಗೆ ತೀರ್ಮಾನ ಕೈಗೊಳ್ಳುವ ಕ್ವಾಸಿ ಜ್ಯುಡಿಷಿಯಲ್‌ ಅಧಿಕಾರ ನೀಡಿತ್ತು. ಈ ಅಧಿಕಾರಿಗಳ ನಿರ್ಧಾರದ ಬಗ್ಗೆ ಸರ್ಕಾರವಾಗಲೀ ಅಥವಾ ಬಿಡಿಎ ಅಡಳಿತ ಮಂಡಳಿಯಾಗಲೀ ಮಧ್ಯ ಪ್ರವೇಶಿಸುವಂತಿರಲಿಲ್ಲ. ಈ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸ್ವಾಧೀನದಿಂದ ಹೊರತು ಪಡಿಸಿದ ಜಮೀನನ್ನು ಬಿಟ್ಟು ಉಳಿಕೆ ಜಮೀನಿಗೆ ಬಿಡಿಎಯು 1766 ಎಕರೆ 7 ಗುಂಟೆ ಜಮೀನಿಗೆ ಪರಿಷ್ಕೃತ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಬೇಕಾಯಿತು.
 
ಅಕ್ರಮ ನಡೆದಿರುವುದು ಹಿಂದಿನ ಸರ್ಕಾರಗಳ ಅವಧಿಯಲ್ಲೇ ಹೊರತು ತಮ್ಮ ಸರ್ಕಾರದ ಅವಧಿಯಲ್ಲಿ ಅಲ್ಲ ಎಂದು ಅವರು ವಿವರಣೆ ನೀಡಿದರು ಎಂದು ಮೂಲಗಳು ಹೇಳಿವೆ. ಸಿಎಂ ಅವರಿಂದ ಈ ವಿವರಣೆ ಪಡೆದ ನಂತರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದಿಗ್ವಿಜಯಸಿಂಗ್‌ ಅವರು ಅರ್ಕಾವತಿ ವಿಚಾರದಲ್ಲಿ ಸರ್ಕಾರದ ಕ್ರಮಗಳನ್ನು ಬಲವಾಗಿ ಸಮರ್ಥಿಸಿಕೊಂಡರು.
 
30ಕ್ಕೆ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆ
 
ತೀವ್ರ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೆ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆ ಜ.30ರಂದು ನಗರದಲ್ಲಿ ನಡೆಯಲಿದೆ. ತಮ್ಮ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳ ಸಮರ್ಪಕ ಜಾರಿ ಕುರಿತು ಚರ್ಚೆ ನಡೆಯಲಿದೆ ಎಂದು ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜ.30ರಂದು ಮಧ್ಯಾಹ್ನ 1 ಗಂಟೆಗೆ ಈ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್‌, ಸಚಿವರಾದ ಕೆ.ಜೆ.ಜಾರ್ಜ್‌, ಡಿ.ಕೆ.ಶಿವಕುಮಾರ್‌ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಚೆಲ್ಲಕುಮಾರ್‌, ಶಾಂತಾರಾಮ ನಾಯ್ಕ ಮೊದಲಾದವರು ಪಾಲ್ಗೊಳ್ಳುವರು.
 
2 ದಿನದಲ್ಲಿ ಆಯೋಗಕ್ಕೆ ಅರ್ಕಾವತಿ ದಾಖಲೆ
 
ಅರ್ಕಾವತಿ ಡಿನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಕೆಂಪಣ್ಣ ಆಯೋಗಕ್ಕೆ ಎರಡು ದಿನಗಳಲ್ಲಿ ದಾಖಲೆ ಒದಗಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅರ್ಕಾವತಿ ಡಿನೋಟಿಫಿಕೇಷನ್‌ನ ಸಮಗ್ರ ದಾಖಲೆ ಕಲೆ ಹಾಕಿದ್ದು, ಎಲ್ಲವನ್ನೂ ಆಯೋಗಕ್ಕೆ ಕೊಡುತ್ತೇನೆ. ನನ್ನ ಕಾಲದ್ದೂ ಸೇರಿ ಎಲ್ಲರದ್ದೂ ತನಿಖೆಯಾಗಲಿದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಗೌಡರ ಕುಟುಂಬದ ಆಸ್ತಿಯಿದೆ. ಅಲ್ಲಿ ಜೆಡಿಎಸ್‌ ಕಚೇರಿ ಕಟ್ಟಲಿ ಎಂಬ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾವು ಅವರಂತೆ ಯಾವುದೇ ಬೇನಾಮಿ ಆಸ್ತಿ ಮಾಡಿಲ್ಲ. ಕಚೇರಿ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ ಎಂದರು.
 
ನಿಗಮಗಳ ನೇಮಕ ಚರ್ಚೆ
 
ಸಿದ್ದರಾಮಯ್ಯ, ಪರಮೇಶ್ವರ್‌ ಜತೆಗಿನ ಮಾತುಕತೆ ವೇಳೆ 80 ನಿಗಮ-ಮಂಡಳಿಗಳ ನಿರ್ದೇಶಕ ಹಾಗೂ ಸದಸ್ಯ ಸ್ಥಾನಗಳಿಗೆ ನೇಮಕಾತಿ ವಿಚಾರ ಕೂಡ ಚರ್ಚೆಗೆ ಬಂದಿದ್ದು, ಈ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಿಎಂಗೆ ದಿಗ್ವಿಜಯ್‌ ಸೂಚಿಸಿದರು ಎನ್ನಲಾಗಿದೆ.
 
 
 
 

ವೆಬ್ದುನಿಯಾವನ್ನು ಓದಿ