ಕಾಂಗ್ರೆಸ್ ಸರಕಾರ ಬಿಬಿಎಂಪಿ ವಿಭಜಿಸುವ ಬಿಲ್ ಹಿಂಪಡೆಯಲಿ: ಆಶೋಕ್

ಮಂಗಳವಾರ, 25 ಆಗಸ್ಟ್ 2015 (14:11 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಿಬಿಎಂಪಿ ವಿಭಜಿಸುವ ಬಿಲ್ ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಇತಿಹಾಸ ಪುಟದಲ್ಲಿ ಸೇರಿ ಹೋಗಲಿದೆ ಎಂದು ಬಿಜೆಪಿ ಮುಖಂಡ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಎಚ್ಚರಿಸಿದರು.
 
ರಾಜ್ಯದಲ್ಲಿ ಅಧಿಕಾರರೂಢವಾಗಿರುವ ಪಕ್ಷ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದಿರುವುದು ಉದಾಹರಣೆಗಳಿವೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದರೂ ಮತದಾರರು ಬಿಜೆಪಿಗೆ ಗೆಲ್ಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
 
ಬಿಜೆಪಿ ಕಾರ್ಯಕರ್ತರು ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸಿ ಪಕ್ಷದ ಗೆಲುವಿಗೆ ಕಾರಣರಾದವರಿಗೆ ನನ್ನ ಅಭಿನಂಧನೆಗಳು ಎಂದರು.
 
ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರ ಮಾತನಾಡದೆ ಕೇವಲ ಟೀಕೆ ಟಿಪ್ಪಣೆಗಳನ್ನು ಮಾಡುವುದರಲ್ಲಿ ಕಾಲ ಕಳೆದಿದ್ದರಿಂದ ಸೋಲನುಭವಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಬಿಬಿಎಂಪಿ ವಿಭಜಿಸುವ ಕಾರ್ಯಕ್ಕೆ ಕೈಹಾಕಿದ್ದನ್ನು ಬಿಟ್ಟರೆ ಅಭಿವೃದ್ಧಿಯತ್ತ ಗಮನಹರಿಸಲಿಲ್ಲ ಎಂದು ಲೇವಡಿ ಮಾಡಿದರು.
 
ಬೆಂಗಳೂರು ಅಭಿವೃದ್ಧಿಪಥವಾಗಿ ನಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಕಾರ ಪಡೆದು ನಗರವನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಗುರಿಯಾಗಿದೆ ಎಂದರು
 
ನಗರದಲ್ಲಿರುವ 12 ಬಿಜೆಪಿ ಶಾಸಕರು ಕಾಯಾ ವಾಚಾ ಮನಸಾ ದುಡಿದಿದ್ದರಿಂದ ಪಕ್ಷಕ್ಕೆ ಗೆಲುವು ದೊರೆತಿದೆ. ಬಿಜೆಪಿ ರಾಜ್ಯ ಅಧ್ಯಕ್ಷರಾದ ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಅರವಿಂದ್ ಲಿಂಬಾವಳಿಯವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ