ಪಟ್ಟಾಭಿಷೇಕ ಹಿನ್ನೆಲೆ ಅರಮನೆಯಲ್ಲಿ ಭಕ್ಷ ಭೋಜನ

ಗುರುವಾರ, 28 ಮೇ 2015 (11:41 IST)
ಮೈಸೂರು ರಾಜ ಸಂಸ್ಥಾನದಲ್ಲಿ 27ನೇ ಯದುವೀರರ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಅಥಿತಿಗಳಿಗಾಗಿ ಭಕ್ಷ ಭೋಜನ ಏರ್ಪಡಿಸಲಾಗಿದ್ದು, ಅಡುಗೆ ತಯಾರಿಕೆ ಕಾರ್ಯ ಭರದಿಂದ ಸಾಗಿದೆ. 
 
ಇನ್ನು ಕಾರ್ಯಕ್ರಮ ಹಿನ್ನೆಲೆ ಇಂದು ಬೆಳಗ್ಗೆಯಿಂದಲೇ ಅಡುಗೆ ಕಾರ್ಯವನ್ನು ಹಮ್ಮಿಕೊಂಡಿದ್ದು, 150ಕ್ಕೂ ಅಧಿಕ ಮಂದಿ ಬಾಣಸಿಗರು ಅಡುಗೆ ಕಾರ್ಯದಲ್ಲಿ ನಿರತರಾಗಿದ್ದಾರೆ. 
 
ಅತಿಥಿಗಳಿಗೆ ಏನೇನನ್ನು ಉಣಬಡಿಸಲಾಗುತ್ತದೆ?   
ವೆಜ್ ಬಿರಿಯಾನಿ, ಈರುಳ್ಳಿ ಸಂಡಿಗೆ, ಮೈಸೂರು ಪಾಕ್, ಕಡ್ಲೇ ಬೇಳೆ, ಕೋಸಂಬರಿ, ಅನ್ನ, ತಿಳಿಸಾರು, ಶಾವಿಗೆ ಪಾಯಸ, ಗೋಬಿ ಮಂಚೂರಿ, ಜಾಮೂನು, ಪೊಂಗಲ್ ಹಾಗೂ ಪನ್ನೀರ್ ಸೇರಿದಂತೆ 25 ಬಗೆಯ ಅಡುಗೆಗಳನ್ನು ತಯಾರಿಸಲಾಗಿದೆ. 
 
ಇನ್ನು ಅಡುಗೆ ಕಾರ್ಯವು ಪ್ರಧಾನ ಬಾಣಸಿಗ ಶ್ರೀನಿವಾಸ್ ನೇತೃತ್ವದಲ್ಲಿ ನಡೆಯುತ್ತಿದ್ದು, ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಬೆಳಗ್ಗೆ ಬರುವ ಅತಿಥಿಗಳಿಗಾಗಿ ತಿಂಡಿ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ ಸಕಲ ಭೋಜನಗಳನ್ನೂ ಬಡಿಸಲಾಗುತ್ತದೆ. ಒಟ್ಟು 1500 ಮಂದಿಗೆ ಈಗಾಗಲೇ ಭೋಜನ ತಯಾರಿಸಲಾಗಿದೆ ಎಂದಿದ್ದಾರೆ.
 
ಇದೇ ವೇಳೆ, ನಾವು ಸಾಕಷ್ಟು ಕಡೆಗಳಲ್ಲಿ ಅಡುಗೆ ತಯಾರಿಸಿದ್ದೇವೆ, ಆದರೆ ಇಲ್ಲಿ ಪಟ್ಟಾಭಿಷೇಕ ಹಿನ್ನೆಲೆಯಲ್ಲಿ ತಯಾರಿಸುತ್ತಿರುವ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಅಲ್ಲದೆ ಸುಸೂತ್ರವಾಗಿ ನಡೆಸಿಕೊಡಬೇಕು ಎಂಬ ಕಾರಣದಿಂದ ಇಂದು ನಸುಕಿನ ವೇಳೆಯಿಂದಲೇ ಅಡುಗೆ ತಯಾರಿಕೆಗೆ ಸಿದ್ಧತೆ ಮಾಡಿಕೊಂಡಿದ್ದೆವು ಎಂದಿದ್ದಾರೆ. 
 
ಮೈಸೂರು ರಾಜವಂಶದ 27ನೇ ಅರಸರಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯ 27ನೇ ರಾಜರಾಗಿ ಇಂದು ಸಿಂಹಾಸನ ಏರಿರುವ ಹಿನ್ನೆಲೆಯಲ್ಲಿ ಬಂದ ಅತಿಥಿಗಳಿಗೆ ಈ ಎಲ್ಲಾ ಭೋಜನಗಳನ್ನು ಸಿದ್ಧಪಡಿಸಲಾಗಿದೆ. 

ವೆಬ್ದುನಿಯಾವನ್ನು ಓದಿ