ಹೆಚ್ಚಿನ ತನಿಖೆಗಾಗಿ ಹೈದರಾಬಾದ್‌ಗೆ ಕರೆದೊಯ್ದ ಎಸ್ಐಟಿ

ಶನಿವಾರ, 1 ಆಗಸ್ಟ್ 2015 (16:52 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಅಶ್ವಿನ್ ರಾವ್‌ನನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಇಂದು ಹೈದರಾಬಾದ್‌ಗೆ ಕರೆದೊಯ್ದು ತೀವ್ರ ತನಿಖೆ ನಡೆಸುತ್ತಿದ್ದಾರೆ. 
 
ಇದೇ ಆರೋಪಿಯನ್ನು ಕಳೆದ ಜುಲೈ 27ರಂದು ಹೈದರಾಬಾದ್ ನಲ್ಲಿ ಬಂಧಿಸಿದ್ದ ಪೊಲೀಸರು, ಬಳಿಕ 28ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಮನವಿ ಸಲ್ಲಿಸುವ ಮೂಲಕ ತಮ್ಮ ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದಲೂ ಕೂಡ ತೀವ್ರ ವಿಚಾರಣೆಗೊಳಪಡಿಸಿದ್ದರು. ಇಂದು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ತೆಲಂಗಾಣ ರಾಜಧಾನಿ ಹೈದರಾಬಾದ್‌ಗೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ. 
 
ಇನ್ನು ಆರೋಪಿ ಅಶ್ವಿನ್ ರಾವ್‌‍ನ‌ನ್ನು ಇಲ್ಲಿನ ರೇನ್‌ಬೋ ಎಂಬ ಹೆಸರಿನ ಅಪಾರ್ಟ್‌ಮೆಂಟ್‌ನಲ್ಲಿ ಬಂಧಿಸಲಾಗಿತ್ತು. ಅಲ್ಲದೆ ಇಲ್ಲಿನ ಕುಕಟಪಲ್ಲಿ ಠಾಣೆಗೆ ಕರೆದೊಯ್ದು ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಅದೇ ಜಾಗಕ್ಕೆ ಕರೆದೊಯ್ದು ತನಿಖೆ ನಡೆಸಲಾಗುತ್ತಿದೆ. ಇನ್ನು ವಿಚಾರಣಾಧೀನ ಆರೋಪಿ ಅಶ್ವಿನ್ ರಾವ್, ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾಯಾಮೂರ್ತಿ ವೈ.ಭಾಸ್ಕರ್ ರಾವ್ ಅವರ ಪುತ್ರ ಆಗಿದ್ದಾರೆ. 

ವೆಬ್ದುನಿಯಾವನ್ನು ಓದಿ