ರಮ್ಯಾ ವಿರುದ್ಧ ಹರಿಹಾಯ್ದ ಶಾಸಕ ಸೋಮಶೇಖರ್: ಹರಿಪ್ರಸಾದ್‌ಗೆ ದೂರು

ಸೋಮವಾರ, 12 ಅಕ್ಟೋಬರ್ 2015 (13:42 IST)
ಮೃತ ರೈತರಿಗೆ ನೀಡಬೇಕಿದ್ದ ಚೆಕ್‌ನ್ನು ಸಚಿವ ಅಂಬರೀಶ್ ಅವರು ಜೆಡಿಎಸ್ ಸಂಸದ ಸಿ.ಎಸ್.ಪುಟ್ಟರಾಜು ಅವರಿಗೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಸ್.ಟಿ.ಸೋಮಶೇಖರ್ ಅವರು ಇಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ವರದಿ ಸಲ್ಲಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದ ವೇಳೆ ನಡೆದ ಎಲ್ಲಾ ವಿದ್ಯಾಮಾನಗಳ ಬಗೆಗಿನ ಸಂಪೂರ್ಣ ವರದಿಯನ್ನು ಹರಿಪ್ರಸಾದ್ ಅವರಿಗೆ ಸಲ್ಲಿಸಿದ್ದೇನೆ. ಅದೇ ವರದಿಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕೂಡ ಸಲ್ಲಿಸಲಿದ್ದೇನೆ ಎಂದ ಅವರು, ಅಸಂಬರೀಶ್ ಅವರು ಚೆಕ್‌ನ್ನು ಪುಟ್ಟರಾಜು ಅವರಿಗೆ ನೀಡಿದ್ದು ಅಂತಹ ದೊಡ್ಡ ತಪ್ಪೇನಾಗಿರಲಿಲ್ಲ. ಆದರೆ ಅದನ್ನು ನಮ್ಮದೇ ಪಕ್ಷದ ಓರ್ವ ನಾಯಕರು ಪಕ್ಷದ ವರಿಷ್ಠರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ಅಂಬರೀಶ್ ಅವರ ಘನತೆಗೆ ಧಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆ ನಾಯಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹರಿಹಾಯ್ದರು. 
 
ಇದೇ ವೇಳೆ, ಮೃತ ರೈತನ ಪತ್ನಿ ಶೋಭಾ ಅವರ ಹೆಸರಿನಲ್ಲಿ ಅಕೌಂಟ್ ಇರಲಿಲ್ಲ. ಆದ ಕಾರಣ ಸಂಸದರು ಅದೇ ಗ್ರಾಮದ ವ್ಯಾಪ್ತಿಯಲ್ಲಿರುವ ಕಾರಣ ಅವರಿಗೆ ಸೂಕ್ತವಾಗಿ ಹಣ ತಲುಪುವಂತೆ ಮಾಡಿ ಎಂದು ತಿಳಿಸಿ ಅಂಬರೀಶ್ ಆ ಚೆಕ್‌ನ್ನು ವಿತರಿಸಿದ್ದರಷ್ಟೇ. ಆದರೆ ಆ ಸಣ್ಣ ವಿಷಯವನ್ನು ರಾದ್ದಾಂತ ಮಾಡಿ ವೈಯಕ್ತಿಕವಾಗಿ ಟೀಕಿಸುವ ಮಟ್ಟ ತಲುಪಿದೆ. ಇದರಿಂದ ಪಕ್ಷಕ್ಕೂ ಧಕ್ಕೆ ಬಂದಿದ್ದು, ಅಂತಹ ನಾಯಕರ ವಿರುದ್ಧ ಸೂಕ್ತ ಕ್ರಮ ಅಗತ್ಯವಾಗಿದೆ ಎಂದು ಪರೋಕ್ಷವಾಗಿ ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಹರಿಹಾಯ್ದರು. 

ವೆಬ್ದುನಿಯಾವನ್ನು ಓದಿ