ಡಿ.ಕೆ.ರವಿ ಪ್ರಕರಣ: ಬಯಲಾದ ಕೆಲ ಸತ್ಯ

ಗುರುವಾರ, 21 ಮೇ 2015 (09:11 IST)
ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿರುವ ಐಎಎಸ್ ಅಧಿಕಾರಿ ಡಿ.ಕೆ.ರವಿ ಅನುಮಾಸ್ಪದ ಸಾವಿನ ಪ್ರಕರಣದಲ್ಲಿ ಕೆಲವೊಂದು ಸತ್ಯಗಳು ಬಯಲಾಗಿವೆ. ಸಾವನ್ನಪ್ಪುವುದಕ್ಕೂ ಮುನ್ನ ರವಿಯವರು ತಮ್ಮ ಸ್ನೇಹಿತೆಯಾದ ಮಹಿಳಾ ಐಎಎಸ್ ಅಧಿಕಾರಿಗೆ ಕರೆ ಮಾಡಿದ್ದು 44 ಬಾರಿಯಲ್ಲ. ಕೇವಲ ಒಂದು ಬಾರಿ ಎಂದು ಸಿಬಿಐ ಮೂಲಗಳು ಖಚಿತಪಡಿಸಿವೆ. ಅಲ್ಲದೇ ರವಿ ಮತ್ತು ಐಎಎಸ್ ಅಧಿಕಾರಿ ಆತ್ಮೀಯ ಸ್ನೇಹಿತರು ಎಂಬುದು ರವಿ ಕಳುಹಿಸಿರುವ ಕೊನೆಯ ವಾಟ್ಸಪ್ ಸಂದೇಶದಿಂದ ದೃಢಪಟ್ಟಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಅವರ ಸಾವಿಗೆ ಸಂಬಂಧಿಸಿದಂತೆ ವದಂತಿಗಳನ್ನು ಹಬ್ಬಿಸುವುದರ ಹಿಂದೆ  ರಾಜ್ಯದ ಕೆಲವು ಅಧಿಕಾರಿಗಳ ಕೈವಾಡವಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
 
ರವಿಯವರ ಕುಟುಂಬಸ್ಥರ ಜತೆ ನಡೆಸಿದ ವಿಚಾರಣೆಯಲ್ಲಿ ಪತ್ನಿ ಜತೆ ಅವರ ಸಂಬಂಧ ಚೆನ್ನಾಗಿತ್ತು. ಅವರ ನಡುವೆ ಯಾವುದೇ ರೀತಿಯ ವೈಮನಸ್ಸು ಇರಲಿಲ್ಲವೆಂಬುದು ತಿಳಿದು ಬಂದಿದೆ. 
 
ವಿಕ್ಟೋರಿಯಾ ಆಸ್ಪತ್ರೆಯವರು ಮಾಡಿರುವ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಲೋಪ ಕಂಡು ಬಂದರೆ ಮರು ಮರುಣೋತ್ತರ ಪರೀಕ್ಷೆ ನಡೆಸಲಾಗುವುದು. ಈ ಹಿಂದೆ ನಡೆಸಿದ ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ನೇಣು ಬಿಗಿದುಕೊಂಡಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ವರದಿಯನ್ನು ಮತ್ತೆ ತಜ್ಞರ ಪರಿಶೀಲನೆಗೊಳಪಡಿಸಲು ಸಿಬಿಐ ನಿರ್ಧರಿಸಿದೆ.
 
ಪ್ರಾಥಮಿಕ ಹಂತದ ತನಿಖೆಯಲ್ಲಿ ರವಿ ಪರಿವಾರದವರನ್ನು ಹೊರತು ಪಡಿಸಿದರೆ ಇನ್ಯಾರು ಕೂಡ ರವಿಯವರನ್ನು ಹತ್ಯೆಗೈಯ್ಯಲಾಗಿದೆ ಎಂಬ ಶಂಕೆಯನ್ನು ವ್ಯಕ್ತ ಪಡಿಸಿಲ್ಲ. 

ವೆಬ್ದುನಿಯಾವನ್ನು ಓದಿ