ಹಾವಿನ ದ್ವೇಷ 12 ವರುಷ, ಮಗನ ದ್ವೇಷ 18 ವರುಷ

ಶುಕ್ರವಾರ, 3 ಜುಲೈ 2015 (20:15 IST)
ಹುಬ್ಬಳ್ಳಿಯ ಹೊಸಗಬ್ಬೂರು ಗ್ರಾಮದ ಅರುಣ್ 18 ವರ್ಷಗಳ ಬಳಿಕ ತನ್ನ ತಂದೆ ಶರಣಬಸಪ್ಪರನ್ನು ಭೇಟಿಯಾಗಿ ಅವರ ಜೊತೆ ಜಗಳತೆಗೆದ. ಜಗಳ ವಿಕೋಪಕ್ಕೆ ತಿರುಗಿ ಜನ್ಮಕೊಟ್ಟ ತಂದೆಗೆ ಚೂರಿಯಿಂದ ಇರಿದ. ಜಗಳ ಬಿಡಿಸಲು ಪ್ರಯತ್ನಿಸಿದ ಅರುಣ್ ಸ್ನೇಹಿತನೊಬ್ಬನಿಗೂ ಗಾಯವಾಯಿತು. ಶರಣಬಸಪ್ಪ ರಕ್ತದ ಮಡುವಿನಲ್ಲಿ ಬಿದ್ದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು.  
 
ಅರುಣ್ ತನ್ನ ತಂದೆಯನ್ನು ಕೊಲ್ಲಲು ಮುಖ್ಯ ಕಾರಣ ಸೇಡು.  ಅದು ಸುಮಾರು 18 ವರ್ಷಗಳ ಹಿಂದಿನ ಸೇಡು. ತಂದೆ ಶರಣಬಸಪ್ಪ ತನ್ನ ಪತ್ನಿ, ಅರುಣ್ ತಾಯಿಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದ್ದರಿಂದ ಅರುಣ್ ತಾಯಿ ಸತ್ತಿದ್ದರು. ಶರಣಬಸಪ್ಪ 7 ವರ್ಷ ಜೈಲುವಾಸ ಕೂಡ ಅನುಭವಿಸಿದ್ದರು. ಜೈಲಿನಿಂದ ಬಂದ ಬಳಿಕ ಅವರು ಪ್ರತ್ಯೇಕವಾಗಿ ವಾಸವಾಗಿದ್ದು, ಅರುಣ್ ಸಂಬಂಧಿಕರ ಮನೆಯಲ್ಲಿ ವಾಸವಿದ್ದ.

ಇದರಿಂದ ತಂದೆಯ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಅರುಣ್  18 ವರ್ಷಗಳ ಬಳಿಕ ತಂದೆಯನ್ನು ಸಂಧಿಸಿ ಚೂರಿಯಿಂದ ಇರಿದು ಸೇಡುತೀರಿಸಿಕೊಂಡ.ಅರುಣ್ ಹಾಗೂ ಅರುಣ್ ಜೊತೆಗಿದ್ದ ಪ್ರಕಾಶ್‌ನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ