ಕಾಂಗ್ರೆಸ್ ಸರಕಾರದ ವಿರುದ್ಧವೇ ಸ್ಪೀಕರ್ ಕಾಗೋಡು ಗರಂ

ಮಂಗಳವಾರ, 26 ಆಗಸ್ಟ್ 2014 (14:10 IST)
ರಾಜ್ಯದಲ್ಲಿ ಆಡಳಿತ ಉಂಟಾ... ಎಂದು ವಿಧಾನಸಭೆಯ ಸಭಾಪತಿ ಕಾಗೋಡು ತಿಮ್ಮಪ್ಪ ಸೋಮವಾರ ಇಲ್ಲಿ ಪ್ರಶ್ನಿಸಿದರು.
 
‘ಅನುಸೂಚಿತ ಬುಡಕಟ್ಟುಗಳು ಹಾಗೂ ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮ 2006’ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
 
‘ಆರು ವರ್ಷಗಳ ಹಿಂದೆ ಜಾರಿಗೆ ಬಂದ ಕಾನೂನು (ಅರಣ್ಯವಾಸಿಗಳ ಅಧಿನಿಯಮ) ಇನ್ನೂ ಅನು ಷ್ಠಾನಕ್ಕೆ ಬಂದಿಲ್ಲ. ಸಿ.ಎಂಗೆ ಕೈ ಮುಗಿದು ಕೇಳಿದ್ದೇನೆ. ನನಗೆ ಹೋರಾಟದ ನೋವಿದೆ’ ಎಂದು ಭಾವಾ ವೇಶದಿಂದ ನುಡಿದರು.
 
‘ಗ್ರಾಮದಲ್ಲಿ ಜನರು ಹಕ್ಕುಪತ್ರ ನೀಡಲು ಬಂದೂಕು ತೋರಿಸಬೇಕಾ? ಜನರನ್ನು ನಕ್ಸಲೈಟ್‌ರತ್ತ ತಳ್ಳಬೇಡಿ’ ಎಂದು ಗರಂ ಆಗಿ ನುಡಿದ ಅವರು, ‘ಕಾನೂನುಗಳೇಕೆ? ಅಧಿಕಾರಿಗಳಿಗೆ ಚೆಂದ ನೋಡಲಾ? ಅಧಿಕಾರಿಗಳನ್ನು ಕರೆಯಿಸಿ. ಒಂಟಿ ಕಾಲಿನಲ್ಲಿ ನಿಲ್ಲಿಸಿ. ಕೆಲಸ ತೆಗೆಯಿರಿ’ ಎಂದು ವಾಗ್ದಾಳಿ ನಡೆಸಿದರು.
 
ಇದಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ಅವರು, ‘ಉಪಚುನಾವಣೆ ಗೆಲುವು ಆಡಳಿತ ಪಕ್ಷಕ್ಕೆ ಕಿರೀಟ ಇಟ್ಟಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಆದರೆ, ಜನರ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಸರ್ಕಾರವನ್ನು ಎಚ್ಚರಿಸಿದ್ದೇನೆ. ಸಚಿವ ಸಂಪುಟ ರಚನೆ ಮುಖ್ಯಮಂತ್ರಿ ಅವರ ಪರಮಾಧಿಕಾರ’ ಎಂದರು.
 
ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್‌ ಭೇಟಿ ಕುರಿತ ಪ್ರಶ್ನೆಗೆ ‘ಯಾರು ದಿಗ್ವಿಜಯ ಸಿಂಗ್‌? ಯಾರೆಂದು ನನಗೆ ಗೊತ್ತಿಲ್ಲ’ ಎಂದು ಮುಗುಳ್ನಕ್ಕರು.

ವೆಬ್ದುನಿಯಾವನ್ನು ಓದಿ