ಚರ್ಚೆಗೆ ಅವಕಾಶ ನೀಡಲಿಲ್ಲ: ಕಾಗೋಡು ವಿರುದ್ಧ ಹೆಚ್ಡಿಕೆ ಅಸಮಧಾನ

ಬುಧವಾರ, 1 ಜುಲೈ 2015 (12:18 IST)
ನಗರದಲ್ಲಿ ಇಂದು ಜೆಡಿಎಸ್ ಶಾಸಕಾಂಗ ಸಭೆ ನಡೆದಿದ್ದು, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. 
 
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ವಿಧಾನಸಭೆಯಲ್ಲಿ ನಮ್ಮ ಪಕ್ಷವು 40 ಮಂದಿ ಶಾಸಕರ ಬಣವನ್ನು ಹೊಂದಿದೆ. ನಿನ್ನೆ ನಡೆದ ಕಲಾಪದಲ್ಲಿ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಯ ಬಗ್ಗೆ ಮಾತನಾಡಬೇಕೆಂದಿದ್ದೆ. ಆದರೆ ನಮಗೆ ಸದನದಲ್ಲಿ ಮಾತನಾಡಲು ಸಭಾಧ್ಯಕ್ಷರು ಅವಕಾಶ ನೀಡಿಲ್ಲ. ನಾವು ಟಿಎ, ಡಿಎ ಪಡೆದುಕೊಳ್ಳಲು ಸದನಕ್ಕೆ ಬರುತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿಯುವ ಮೂಲಕ ಸಭಾಧ್ಯಕ್ಷರ ವಿರುದ್ಧದ ಅಸಮಧಾನವನ್ನು ಹೊರಹಾಕಿದ್ದಾರೆ.   
 
ನಿನ್ನೆ ನಡೆದ ಕಲಾಪದಲ್ಲಿ ಕಬ್ಬು ಬೆಳೆಗಾರರ ಬಾಕಿ ಪಾವತಿ ಹಿನ್ನೆಲೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದ್ದರು. ಇದರಿಂದ ಸದನವು ಕೆಲ ಕಾಲ ಗೊಂದಲದ ಗೂಡಾಗಿ ಪರಿಣಮಿಸಿತ್ತು. ಕೊನೆಗೂ ಸರ್ಕಾರ ಜುಲೈ ಅಂತ್ಯದೊಳಗೆ ಸಂಪೂರ್ಣ ಹಣ ಪಾವತಿಗೆ ಸಮ್ಮತಿಸಿತು. ಇದೇ ಬೆನ್ನಲ್ಲಿ ಕುಮಾರಸ್ವಾಮಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ