ಯೋಧನ ಆರೋಗ್ಯಕ್ಕಾಗಿ ವಿಶೇಷ ಪೂಜೆ

ಮಂಗಳವಾರ, 9 ಫೆಬ್ರವರಿ 2016 (16:58 IST)
ಸಿಯಾಚಿನ್‌ನ ನೀರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಪವಾಡಸದೃಶವಾಗಿ ಬದುಕಿ ಬಂದಿರುವ ಕರ್ನಾಟಕದ ಯೋಧ, ಲ್ಯಾನ್ಸ್ ನಾಯಕ್  ಹನುಮಂತಪ್ಪ ಕೊಪ್ಪದ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಕನ್ನಡ ಪರ ಹೋರಾಟಗಾರರು ಬೆಳಗಾವಿಯಲ್ಲಿ ಪೂಜೆಯನ್ನು ಕೈಗೊಂಡಿದ್ದಾರೆ.

ಚೆನ್ನಮ್ಮ ವೃತ್ತದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಯೋಧನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. 
 
ಸೋಮವಾರ ರಾತ್ರಿ ಜೀವಂತವಾಗಿ ಪತ್ತೆಯಾಗಿದ್ದ ಯೋಧರಿಗೆ ಸದ್ಯ ನವದೆಹಲಿಯ ಆರ್. ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಗಂಭೀರವಾಗಿದ್ದು ಲಿವರ್ ಮತ್ತು ಮೂತ್ರ ಪಿಂಡಗಳು ನಿಷ್ಕ್ರಿಯವಾಗಿವೆ, ಅವರು ನ್ಯುಮೋನಿಯಾದಿಂದ ಸಹ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಶೇಷ ವೈದ್ಯರ ತಂಡ ಅವರನ್ನು ಉಳಿಸಲು ಶ್ರಮಿಸುತ್ತಿದೆ.
 
ಕುಂದಗೋಳ ತಾಲ್ಲೂಕಿನ ಬೆಟ್ಟದೂರಿನ ನಿವಾಸಿಯಾಗಿದ್ದು, ಕಳೆದ 15 ವರ್ಷಗಳಿಂದ ಸೇನೆಯಲ್ಲಿರುವ ಅವರು ಲ್ಯಾನ್ಸ್ ನಾಯಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 
 
ಕಳೆದ 6 ದಿನಗಳ ಹಿಂದೆ ಸಂಭವಿಸಿದ ಹಿಮಪಾತದಲ್ಲಿ ಕರ್ನಾಟಕದ ಮೂವರು ಸೇರಿದಂತೆ 10 ಯೋಧರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಮೃತರಾಗಿದ್ದಾರೆನ್ನಲಾಗಿದ್ದವರಲ್ಲಿ ಹನುಮಂತಪ್ಪ ಮಾತ್ರ ಜೀವಂತವಾಗಿ ಪತ್ತೆಯಾಗಿದ್ದಾರೆ.
 

ವೆಬ್ದುನಿಯಾವನ್ನು ಓದಿ