ಹಾಸ್ಟೆಲ್ ಅವ್ಯವಸ್ಥೆ, ಮಕ್ಕಳಿಗೆ ತಂಗಳನ್ನ: ಉಸ್ತುವಾರಿ ಸಚಿವರು ಗರಂ

ಬುಧವಾರ, 28 ಜನವರಿ 2015 (18:24 IST)
ಕನಸುಕಟ್ಟಿಕೊಂಡು ಬರುವ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ನೀವು ಇಲ್ಲಿ ನರಕ ದರ್ಶನ ಮಾಡಿಸುತ್ತಿದ್ದೀರಾ ಎಂದು ವಾರ್ಡನ್‌ಗಳನ್ನು ಪ್ರಶ್ನಿಸುವ ಮೂಲಕ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರು ಜಿಲ್ಲೆಯ ಎಲ್ಲಾ ಹಾಸ್ಟೆಲ್ ವಾರ್ಡನ್‌ಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಗರದಲ್ಲಿ ನಡೆಯಿತು.  
 
ವಾರ್ಡನ್‌ಗಳ ಸಭೆ ಕರೆದಿದ್ದ ಅವರು, ಏಕಾಏಕಿ ಕನಸುಕಟ್ಟಿಕೊಂಡು ಬರುವ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ನೀವು ಇಲ್ಲಿ ನರಕ ದರ್ಶನ ಮಾಡಿಸುತ್ತಿದ್ದೀರಾ ಎಂದು ವಾರ್ಡನ್‌ಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ ಸಚಿವರು, ಸರ್ಕಾರ ಕೋಟಿಗಟ್ಟಲೆ ಅನುಧಾನವನ್ನು ಇಲಾಖೆಗೆ ನೀಡುತ್ತಿದ್ದರೂ ಕೂಡ ವಿದ್ಯಾರ್ಥಿಗಳಿಗೆ ತಂಗಳನ್ನ ಹಾಕುತ್ತಿದ್ದೀರಂತೆ, ನಿಮ್ಮ ಹೆಂಡತಿ ಮಕ್ಕಳನ್ನೂ ಕೂಡ ಹಾಗೆಯೇ ನೋಡಿಕೊಳ್ಳುತ್ತೀರಾ, ಸ್ವಲ್ಪವಾದರೂ ಮನುಷ್ಯತ್ವ ಇಟ್ಟುಕೊಳ್ಳಿ, ಹಾಸ್ಟೆಲ್ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಿ. ಇನ್ನು ಮುಂದೆ ಇಂತಹ ಯಾವುದೇ ಸಮಸ್ಯೆ ಉದ್ಬವಿಸದಂತೆ ನೋಡಿಕೊಳ್ಳಿ ಎಂದು ತಿಳಿ ಹೇಳಿದರು. 
 
ಇದೇ ವೇಳೆ ಚೀನಾ ಪ್ರವಾಸವನ್ನು ನೆನಪಿಸಿಕೊಂಡ ಅವರು, ಚೀನಾದಲ್ಲಿ ಏನಾದರೂ ಹೀಗಾದಲ್ಲಿ ಗುಂಡಿಕ್ಕಿ ಕೊಲ್ಲಲಾಗುತ್ತದೆ ಎಂದರು. ಬಳಿಕ, ಸರ್ಕಾರದ ನೀತಿ ನಿಯಮವನ್ನು ಉಲ್ಲಂಘಿಸಿ ಕಾರ್ಯ ನಿರ್ವಹಿಸಿದಲ್ಲಿ ಅಂತಹ ವಾರ್ಡನ್ ಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 
 
ಇತ್ತೀಚೆಗೆ ಹಾಸ್ಟೆಲ್ ನಲ್ಲಿ ಭೋಜನ ಸವಿದಿದ್ದ ಹಲವು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ವಿಷಯ ತಿಳಿದ ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಗ ಮಕ್ಕಳೆಲ್ಲರೂ ಕೂಡ ಹಾಸ್ಟೆಲ್ ಅವ್ಯವಸ್ಥೆಗಳನ್ನು ತಿಳಿಸುವ ಜೊತೆಗೆ ವಾರ್ಡನ್‌ಗಳ ಮೇಲೆ ಬೆರಳು ತೋರಿದ್ದರು. ಇದೇ ಪ್ರಕರಣ ಸಚಿವರ ಕೆಂಗಣ್ಣಿಗೆ ಕಾರಣವಾಗಿದೆ ಎನ್ನಲಾಗುತ್ತದೆ.  

ವೆಬ್ದುನಿಯಾವನ್ನು ಓದಿ