ಒಂದುವರೆ ವರ್ಷದ ಮಗುವನ್ನು ಕಚ್ಚಿ ಗಾಯಗೊಳಿಸಿದ ಬೀದಿನಾಯಿಗಳು

ಸೋಮವಾರ, 20 ಅಕ್ಟೋಬರ್ 2014 (18:25 IST)
ಬೆಂಗಳೂರಿನಲ್ಲಿ ಮತ್ತೆ ಬೀದಿನಾಯಿಗಳ ದಾಳಿ ಮುಂದುವರೆದಿದ್ದು, ಒಂದೂವರೆ ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ತೀವ್ರ ದಾಳಿ ಮಾಡಿವೆ.
 
ಜೆಪಿ ನಗರದ 9 ಹಂತದಲ್ಲಿರುವ ಮನೆಯ ಮುಂದೆ ಇಂದು ಬೆಳಗ್ಗೆ ಮಗು ಕುಮಾರ ಸ್ವಾಮಿ ಆಟವಾಡುತ್ತಿದ್ದಾಗ, ಸುಮಾರು 5ರಿಂದ 6 ನಾಯಿಗಳು ಮಗುವಿನ ಮೇಲೆ ಏಕಾಏಕಿ ದಾಳಿ ಮಾಡಿವೆ. ಕೂಡಲೇ ಸ್ಥಳೀಯರು ಮಗುವನ್ನು ರಕ್ಷಿಸಿದರಾದರೂ, ಅಷ್ಟರಲ್ಲೇ ನಾಯಿ ದಾಳಿಯಿಂದಾಗಿ ಮಗು ತೀವ್ರವಾಗಿ ಗಾಯಗೊಂಡಿತ್ತು. ಮಗುವಿನ ತಲೆ ಮತ್ತು ಕೈ ಕಾಲುಗಳ ಮೇಲೆ ತೀವ್ರ ಪ್ರಮಾಣದ ಗಂಭೀರಗಾಯಗಳಾಗಿವೆ.
 
ತಕ್ಷಣವೇ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರ ಮಗು ಗಂಭೀರವಾಗಿ ಗಾಯಗೊಂಡಿದ್ದರಿಂದ ಮಗುವನ್ನು ದೊಡ್ಡ ಆಸ್ಪತ್ರೆಗೆ ದಾಖಲಿಸುವಂತೆ ಅಲ್ಲಿನ ವೈದ್ಯರು ಸೂಚಿಸಿದ್ದಾರೆ. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಯಿತಾದರೂ, ಬೆಳಗ್ಗೆ ವೈದ್ಯರು ಇನ್ನೂ ಆಸ್ಪತ್ರೆಗೆ ಬಂದಿರದ ಕಾರಣ ಮಗುವನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಅಲ್ಲಿನ ಸಿಬ್ಬಂದಿಗಳು ಸಲಹೆ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳ ಸಲಹೆಯಂತೆ ಕೂಡಲೇ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.
 
ಆದರೆ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳು ಸುಮಾರು 1 ಗಂಟೆಯ ಕಾಲ ಆ ವಿಭಾಗಕ್ಕೆ ಹೋಗಿ ಈ ವಿಭಾಗಕ್ಕೆ ಹೋಗಿ ಎಂದು ಸತಾಯಿಸುತ್ತಿದ್ದರು. ಸಿಬ್ಬಂದಿಗಳ ಈ ವರ್ತನೆಯ ವಿರುದ್ಧ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ಅಲ್ಲಿನ ನರ್ಸ್ ಒಬ್ಬರು ಮಗುವಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಕೌಂಟರ್‌ನಲ್ಲಿ 5,700ನಲ್ಲಿ ಹಣವನ್ನು ಕಟ್ಟಿ ಬಳಿಕ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದ್ದಾರೆ.
 
ಆದರೆ ಕಲ್ಲು ಹೊಡೆದು ಜೀವನ ಸಾಗಿಸುವ ಪೋಷಕರರಾದ ರಮೇಶ್ ಮತ್ತು ನಾಗಮ್ಮ ಅವರ ಬಳಿ ಅಷ್ಟು ಮೊತ್ತದ ಹಣವಿಲ್ಲದಿದ್ದರಿಂದ ಮಗುವಿಗೆ ಚಿಕಿತ್ಸೆ ನೀಡಿದ ಬಳಿಕ ಹಣವನ್ನು ಪಾವತಿ ಮಾಡುವುದಾಗಿ ಕೋರಿದ್ದಾರೆ. ಆದರೆ ಕಿಮ್ಸ್ ಸಿಬ್ಬಂದಿಗಳು ಇದಕ್ಕೆ ಸಮ್ಮತಿಸದ ಹಿನ್ನಲೆಯಲ್ಲಿ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪೋಷಕರ ಮನವಿಯನ್ನು ವೈದ್ಯರು ಪುರಸ್ಕರಿಸದ ಹಿನ್ನಲೆಯಲ್ಲಿ ಸ್ಥಳೀಯರು ವೈದ್ಯರನ್ನು ಮತ್ತು ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
 
ಈ ವೇಳೆ ಮಧ್ಯ.ಪ್ರವೇಶಿಸಿದ ಕಿಮ್ಸ್ ಅಧೀಕ್ಷಕ ಸುರೇಶ್ ಅವರು ಮತ್ತು ಪೋಷಕರ ನಡುವೆ ವಾಕ್ಸಮರವೇ ಏರ್ಪಟ್ಟಿತ್ತು. ಇದನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮಗಳು ಕೂಡಲೇ ಚಿತ್ರೀಕರಣವನ್ನು ನಿಲ್ಲಿಸುವಂತೆ ಸುರೇಶ್ ಸೂಚಿಸದರು. ಆದರೆ ಮಾಧ್ಯಮ ವರದಿಗಾರರು ಚಿತ್ರೀಕರಣ ನಿಲ್ಲಿಸದ ಹಿನ್ನಲೆಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇಷ್ಟೂ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿದ ಆರೋಗ್ಯ ಸಚಿವ ಯುಟಿ ಖಾದರ್ ಅವರು ಕೂಡಲೇ ಮಗುವಿಗೆ ಚಿಕಿತ್ಸೆ ನೀಡುವಂತೆ ವೈಧ್ಯರಿಗೆ ಸೂಚಿಸಿದ ಬಳಿಕ ಮಗುವಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಹೆಚ್ಚುವರಿ ಚಿಕಿತ್ಸೆಗಾಗಿ ಈಗ ಮಗುವನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ