ಕುರಿ ಹಿಂಡಿನ ಮೇಲೆ ಬೀದಿ ನಾಯಿಗಳ ದಾಳಿ: 46 ಕುರಿಗಳು ಸಾವು

ಬುಧವಾರ, 2 ಸೆಪ್ಟಂಬರ್ 2015 (17:40 IST)
ಮಂದೆಯಲ್ಲಿ ಮೇಯುತ್ತಿದ್ದ 76 ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿರುವ ಬೀದಿ ನಾಯಿಗಳು 46 ಕುರಿಗಳನ್ನು ಕಚ್ಚಿ ಸಾಯಿಸಿರುವ ಧಾರುಣ ಘಟನೆ ನಗರದ ಹೊಸೂರು ರಸ್ತೆಯ ಕೂಡ್ಲು‌ ಗೇಟ್ ಬಳಿ ಇಂದು ಮಧ್ಯಾಹ್ನ ನಡೆದಿದೆ. 
 
ಮೃತ 46 ಕುರಿಗಳು ತಮಿಳುನಾಡು ಮೂಲದ ಚಿಕ್ಕತಾಯಮ್ಮ ಎಂಬುವವರಿಗೆ ಸೇರಿದ್ದು, 76 ಕುರಿಗಳ ಪೈಕಿ 46 ಕುರಿಗಳು ನಾಯಿಗಳ ಹುಚ್ಚು ದಾಳಿಗೆ ಬಲಿಯಾಗಿವೆ. ಈ ಕುರಿಗಳನ್ನು ಇಲ್ಲಿನ ಎಸ್‌ಆರ್‌ಬಿ ಬ್ರಿಕ್ಸ್ ಫ್ಯಾಕ್ಟರಿಯಲ್ಲಿ ಸಾಕಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ. 
 
ಇನ್ನು ಕುರಿ ಕಳೆದುಕೊಂಡ ಚಿಕ್ಕತಾಯಮ್ಮ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನ ಜೀವನಕ್ಕೆ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡು ಪ್ರಸ್ತುತ ಕಂಗಾಲಾಗಿದ್ದೇನೆ. ಈ ಹಿನ್ನೆಲೆಯಲ್ಲಿ ಸರ್ಕಾರ ನೆರವಿಗೆ ಧಾವಿಸಿ ಪರಿಹಾರವನ್ನು ನೀಡಬೇಕು ಎಂದು ಸರ್ಕಾರವನ್ನು ಅಂಗಲಾಚಿದ್ದಾರೆ. 
 
ಈ ಸಂಬಂಧ ಗ್ರಾಮಸ್ಥರೂ ಕೂಡ ಪ್ರತಿಕ್ರಿಯಿಸಿದ್ದು, ಈ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಅವುಗಳನ್ನು ನಿಯಂತ್ರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ