ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು: ಸಹಪಾಠಿಗಳ ಬೃಹತ್ ಪ್ರತಿಭಟನೆ

ಶುಕ್ರವಾರ, 27 ಫೆಬ್ರವರಿ 2015 (12:01 IST)
ಹೆಬ್ಬಾಳದಲ್ಲಿ ನಿನ್ನೆ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ನಗರದ ಸಿಂಧಿ ಕಾಲೇಜಿ ವಿದ್ಯಾರ್ಥಿನಿಯೋರ್ವಳು ಅಸುನೀಗಿದ ಪರಿಣಾಮ ಘಟನೆಯನ್ನು ಖಂಡಿಸಿ ಇಂದು ನಗರದ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಸಾವಿರಾರು ಸಂಖೆಯಲ್ಲಿ ಸೇರಿ ಪ್ರತಿಭಟನೆ ನಡೆಸುತ್ತಿರುವ ಪರಿಣಾಮ ನಗರದ ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ತತೆ ಕಾಣಿಸಿಕೊಂಡಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿದೆ.  
 
ನಗರದ ಪ್ರಮುಖ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಹೆಬ್ಬಾಳ ವೃತ್ತದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆಯಲ್ಲಿ ನಗರದ ಸಿಂಧಿ, ಪ್ರೆಸಿಡೆನ್ಸಿ ಹಾಗೂ ವಿದ್ಯಾನಿಕೇತನ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. 
 
ಸರ್ಕಾರದ ವಿರುದ್ಧ ಘೋಷ ವಾಕ್ಯಗಳನ್ನು ಕೂಗುತ್ತಿರುವ ಪ್ರತಿಭಟನಾಕಾರರು, ಬೇಕೇ ಬೇಕು, ನ್ಯಾಯ ಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆಯಲ್ಲಿ ನಿರತರಾಗಿದ್ದು, ಪ್ರತಿಭಟನೆಯು ದೇವನಹಳ್ಳಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದ್ದು, ಗಾಢ ಪರಿಣಾಮ ಬೀರಿದೆ.  
 
ಇನ್ನು ನಗರದ ಹೆಬ್ಬಾಳ ಬಳಿ ಇರುವ ಕೆಂಪಾಪುರ ಜಂಕ್ಷನ್‌ನಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ವಾಟರ್ ಟ್ಯಾಂಕ್ ಲಾರಿಯೊಂದು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಘಟನೆಯಲ್ಲಿ ವಿದ್ಯಾರ್ಥಿ ಅರ್ಪಿತಾ(19) ಹಾಗೂ ದ್ವಿಚಕ್ರ ವಾಹನ ಸವಾರ ಆನಂದ್(24) ಎಂಬ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 

ವೆಬ್ದುನಿಯಾವನ್ನು ಓದಿ