ವಿದ್ಯಾರ್ಥಿನಿ ಶೂಟೌಟ್ ಪ್ರಕರಣ: ಶಿರಿಷಾ ಆರೋಗ್ಯದ ಬಗ್ಗೆ ವಿಚಾರಿಸಿದ ಸಚಿವೆ ಉಮಾಶ್ರೀ

ಶುಕ್ರವಾರ, 3 ಏಪ್ರಿಲ್ 2015 (13:41 IST)
ಅಟೆಂಡರ್ ಗುಂಡಿನೇಟಿಗೆ ಸಿಲುಕಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಶಿರಿಷಾ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದರು. 
 
ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿನೀಡಿದ ಸಚಿವೆ ಉಮಾಶ್ರೀ, ವಿದ್ಯಾರ್ತಿನಿಯ ಪೋಷಕರು ಹಾಗೂ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮಾತುಕತೆ ನಡೆಸಿ ವಿದ್ಯಾರ್ಥಿನಿಯ ಯೋಗಕ್ಷೇಮವನ್ನು ವಿಚಾರಿಸಿದರು. 
 
ಇದೇ ಮೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿ ಚಿಕಿತ್ಸೆಯ ಎಲ್ಲಾ ಖರ್ಚು ಸರ್ಕಾರವೇ ಭರಿಸಲಿದ್ದು, ಸೂಕ್ತ ಚಿಕಿತ್ಸೆಗೆ ಸೂಚಿಸಿದ್ದೇನೆ. ಅಲ್ಲದೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಕಿಮ್ಮನೆ ರತ್ನಾಕರ ಅವರೊಂದಿಗೂ ಕೂಡ ಚರ್ಚಿಸಿ ವಿದ್ಯಾರ್ಥಿನಿಯ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಲಿದ್ದೇನೆ ಎಂದರು. 
 
ಇನ್ನು ಮಾರ್ಚ್ 31ರಂದು ನಗರದ ಕಾಡುಗೋಡಿಯಲ್ಲಿನ ಪ್ರಗತಿ ಕಾಲೇಜಿನ ಅಟೆಂಡರ್ ಮಹೇಶ್ ಎಂಬಾತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ. ಘಟನೆ ಹಿನ್ನೆಲೆಯಲ್ಲಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದರೆ, ಮತ್ತೋರ್ವ ವಿದ್ಯಾರ್ಥಿನಿ ಶಿರಿಷಾ ಗಾಯಗೊಂಡಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವೆ ಉಮಾಶ್ರೀ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ