ಶೂಟೌಟ್ ಪ್ರಕರಣ: ನನ್ನ ಮಗಳ ಚಾರಿತ್ರ್ಯ ಹರಣ ಬೇಡ ಎಂದು ಕೈ ಮುಗಿದ ವಿದ್ಯಾರ್ಥಿನಿ ತಂದೆ

ಬುಧವಾರ, 1 ಏಪ್ರಿಲ್ 2015 (14:53 IST)
ಗುಂಡು ಹಾರಿಸಿ ವಿದ್ಯಾರ್ಥಿನಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ತಂದೆ ರಮೇಶ್ ಪ್ರತಿಕ್ರಿಯಿಸಿದ್ದು, ನನ್ನ ಮಗಳು ಬಂಗಾರ, ಅವಳ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು ಅವಳ ಚಾರಿತ್ಯ ಹರಣಕ್ಕೆ ಯಾರೂ ಪ್ರಯತ್ನಿಸಬಾರದು ಎಂದು ಮಾಧ್ಯಮಗಳೆದುರು ಮನವಿ ಮಾಡಿಕೊಂಡಿದ್ದಾರೆ.  
 
ಮಾಧ್ಯಮಗಳೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯ ತಂದೆ ರಮೇಶ್, ನನಗಿದ್ದವಳು ಓರ್ವಳೇ ಮಗಳು, ನನ್ನ ಮಗಳು ಅಪ್ಪಟ ಬಂಗಾರ. ಆ ಬಂಗಾರವನ್ನು ಪ್ರಸ್ತುತ ಕಳೆದುಕೊಂಡಿದ್ದೇನೆ. ಆದರೆ ಆಕೆಯ ವಿರುದ್ಧ ಪ್ರಸ್ತುತ ಅಪ ಪ್ರಚಾರ ಮಾಡಲಾಗುತ್ತಿದೆ. ಆ ಮೂಲಕ ಆಕೆಯ ಚಾರಿತ್ಯಕ್ಕೆ ಕಳಂಕ ತರುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಅವಳು ಅಪ್ಪಟ ಚಿನ್ನ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸುವ ಮೂಲಕ ಸರ್ಕಾರ ನ್ಯಾಯ ಒದಗಿಸಬೇಕು ಎಂದಿದ್ದಾರೆ. 
 
ಬಳಿಕ ಮಾತನಾಡಿದ ಅವರು, ನನ್ನ ಮಗಳು ರ್ಯಾಂಕಿಂಗ್ ವಿದ್ಯಾರ್ಥಿಯಾಗಿದ್ದಳು. ಅವಳ ಮುಂದಿನ ವಿದ್ಯಾಭ್ಯಾಸಕ್ಕೆಂದು ಅನುವಾಗಲೆಂಬ ದೃಷ್ಟಿಯಿಂದ ನಗರದ ವಸತಿ ಶಾಲೆಯೊಂದರಲ್ಲಿ ತಂಗಿದ್ದು ಸಿಇಟಿ ತರಬೇತಿ ಪಡೆಯುತ್ತಿದ್ದಳು. ಆದರೆ ಆಕೆಯ ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಆದರೆ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ಸೂಕ್ತ ನ್ಯಾಯ ಒದಗಿಸುವ ಮೂಲಕ ಅವರಳ ಆತ್ಮಕ್ಕೆ ಶಾಂತಿ ಒದಗಿಸಬೇಕು ಎಂದು ಮನವಿ ಮಾಡಿದರು. 
 
ಇನ್ನು ಪ್ರಕರಣ ಸಂಬಂಧ ಮೃತ ಯುವತಿ ಚಿಕ್ಕಪ್ಪ ಕೂಡ ಪ್ರತಿಕ್ರಿಯಿಸಿದ್ದು, ನಮ್ಮ ಮಗಳು ಅಪ್ಪಟ ಚಿನ್ನ. ಅಲ್ಲದೆ ಉತ್ತಮ ವಿದ್ಯಾರ್ಥಿನಿಯಾಗಿದ್ದಳು. ಆದರೆ ಘಟನೆ ತುಂಬಾ ಆಘಾತ ತಂದಿದ್ದು, ಆಕೆಯ ಸಾವಿಗೆ ಸರ್ಕಾರ ಸೂಕ್ತ ನ್ಯಾಯ ಒದಗಿಸಬೇಕು. ಅಲ್ಲದೆ ನಮ್ಮ ಮಗಳನ್ನು ಹತ್ಯೆಗೈಯ್ಯಲು ಆರೋಪಿಗೆ ಪಿಸ್ತೂಲ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಕಾಲೇಜಿನ ಪ್ರಾಂಶುಪಾಲರೇ ಖುದ್ದು ಉತ್ತರ ನೀಡಬೇಕು ಎಂದು ಆಗ್ರಹಿಸಿದರು. 
 
ಬಳಿಕ, ಉತ್ತಮ ಶಾಲೆ ಎಂದು ಪರಿಗಣಿಸಿ ನಮ್ಮ ಮಗಳ ಮುಂದಿನ ತರಬೇತಿಗೆ ಅನುವಾಗಲಿ ಎಂಬ ದೃಷ್ಟಿಯಿಂದ ಶಾಲೆಗೆ 1.65 ಲಕ್ಷ ಪಾವತಿಸಿದ್ದೆವು. ಆದರೆ ಶಾಲೆಯ ಆಡಳಿತ ಸಿಬ್ಬಂದಿಗಳು ನಮ್ಮ ಮಗಳಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ. ಆದ್ದರಿಂದ ಪ್ರಕರಣಕ್ಕೆ ಪ್ರಾಂಶುಪಾಲರೇ ನೇರ ಜವಾಬ್ದಾರಿ ಎಂದು ಆರೋಪಿಸಿದರು. 
 
ಬೆಂಗಳೂರಿನ ಕಾಡಿಗೋಡಿಯ ಪ್ರಗತಿ ಪಿಯುಸಿ ಶಾಲೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಶಾಲೆಯಲ್ಲಿ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಶೇ(40) ಎಂಬ ಆರೋಪಿ ತಮಕೂರು ಜಿಲ್ಲೆಯ ಪಾವಗಡ ಮೂಲದ ವಿದ್ಯಾರ್ಥಿನಿ ಗೌತಮಿ(18) ಎಂಬ ವಿದ್ಯಾರ್ಥಿನಿಯ ಮೇಲೆ ಗುಂಡು ಹಾರಿಸಿ ಹತ್ಯೆಗೈದು ಪರಾರಿಯಾಗಿದ್ದ. ಪ್ರಸ್ತುತ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಆರೋಪಿಯ ತನಿಖೆಯು ಬೆಂಗಳೂರು ನಗರದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿ ಶೇಖರನ್ ನೇತೃತ್ವದಲ್ಲಿ ನಡೆಯುತ್ತಿದೆ. 

ವೆಬ್ದುನಿಯಾವನ್ನು ಓದಿ