ಶೂಟೌಟ್ ಪ್ರಕರಣ: ನಾಳೆ ಅಂತ್ಯ ಸಂಸ್ಕಾರ

ಬುಧವಾರ, 1 ಏಪ್ರಿಲ್ 2015 (17:24 IST)
ಕಾಲೇಜಿನ ಅಟೆಂಡರ್ ಹಾರಿಸಿದ್ದ ಗುಂಡಿಗೆ ಗುರಿಯಾಗಿ ಸಾವನ್ನಪ್ಪಿದ್ದ ವಿದ್ಯಾರ್ಥಿನಿಯ ಅಂತ್ಯ ಸಂಸ್ಕಾರ ನಾಳೆ ಹುಟ್ಟೂರು ತುಮಕೂರಿನ ಪಾವಗಡದಲ್ಲಿ ನಡೆಸಲಾಗುವುದು ಎಂದು ವಿದ್ಯಾರ್ಥಿನಿಯ ತಂದೆ ಟಿ.ರಮೇಶ್ ತಿಳಿಸಿದ್ದಾರೆ. 
 
ಶೂಟೌಟ್ ನಲ್ಲಿ ಸಾವನ್ನಪ್ಪಿದ್ದ ರಮೇಶ್ ಅವರ ಮಗಳು ಗೌತಮಿ ಅವರ ಮೃತ ದೇಹವನ್ನು ನಗರದ ವೈದೇಹಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದರು. ಬಳಿಕ ದೇಹವನ್ನು ಕಾಲೇಜಿನ ಮುಂದೆ ಇರಿಸಿ ಪ್ರತಿಭಟನೆ ನಡೆಸಲು ವಿದ್ಯಾರ್ಥಿನಿ ಪೋಷಕರು ನಿರ್ಧರಿಸಿದ್ದರು. ಆದರೆ ಪೊಲೀಸರು ಕಾಲೇಜಿಗೆ ಮೃತ ದೇಹವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಮೃತ ದೇಹವನ್ನು ಹುಟ್ಟೂರು ಪಾವಗಡಕ್ಕೆ ಸಾಗಿಸಲಾಗುತ್ತಿದೆ. 
 
ಇನ್ನು ಅಂತ್ಯ ಸಂಸ್ಕಾರದ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ ತಂದೆ ಟಿ.ರಮೇಶ್, ಹಿಂದೂ ವಿಧಾನಗಳ ಪ್ರಕಾರ ನಾಳೆ ಹನ್ನೊಂದು ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ. 
 
ಈ ಪ್ರಕರಣವು ಬೆಂಗಳೂರಿನ ಕಾಡುಗೋಡಿಯಲ್ಲಿರುವ ಪ್ರಗತಿ ಕಾಲೇಜಿನಲ್ಲಿ ನಿನ್ನೆ ರಾತ್ರಿ ನಡೆದಿದ್ದು, ವಿದ್ಯಾರ್ಥಿನಿ ಗೌತಮಿಯ ಮೇಲೆ ಕಾಲೇಜಿನಲ್ಲಿ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆರೋಪಿ ಮಹೇಶ್ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದ. 
 
ಪ್ರಕರಣದ ಬಳಿಕ ತನ್ನ ಅಕ್ಕನ ಮನೆಯಲ್ಲಿ ತಂಗಿದ್ದ ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ನಗರದ ಬಿ.ನಾರಾಯಣಪುರದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ