ರಾಜಧಾನಿಯಲ್ಲಿ ಭಾರೀ ಮಳೆ: ಆಶ್ರಮದ ವೃದ್ಧರ ಪಾಡು ಹೇಳತೀರದು

ಸೋಮವಾರ, 5 ಅಕ್ಟೋಬರ್ 2015 (11:40 IST)
ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ಪರಿಣಾಮ ನಗರದ ಹೆಣ್ಣೂರಿನ ಬಳಿ ಇರುವ ಗೆದ್ದಲಹಳ್ಳಿಯಲ್ಲಿನ ಗುಣೇಲಾ ವೃದ್ಧಾಶ್ರಮಕ್ಕೆ ಅಗಾಧ ಪ್ರಮಾಣದ ನೀರು ನುಗ್ಗಿದ್ದು, ಆಶ್ರಮದ ಸಿಬ್ಬಂದಿ ಹಾಗೂ ವೃದ್ಧರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. 
 
ಹೌದು, ನಿನ್ನೆ ರಾತ್ರಿ ಸುರಿದ ಭಾರೀ ಪ್ರಮಾಣದ ಮಳೆ ಹಿನ್ನೆಲೆಯಲ್ಲಿ ಆಶ್ರಮಕ್ಕೆ ರಾಜಾಕಾಲುವೆಯ ನೀರು ನುಗ್ಗಿದ್ದು, ಸುಮಾರು 5ರಿಂದ 6 ಅಡಿಯಷ್ಟು ನೀರು ಒಳ ನುಗ್ಗಿದೆ. ಇದರಿಂದ ವೃದ್ಧರ ಮಲಗುವು ಕೊಠಡಿ ಹಾಗೂ ಅಡುಗೆ ಮನೆ ಸೇರಿದಂತೆ ಇಡೀ ಆಶ್ರಮವೇ ಜಲಾವೃತವಾಗಿದೆ. ಅಲ್ಲದೆ ರಾಜಾಕಾಲುವೆ ಮತ್ತು ಆಶ್ರಮದ ನಡುವೆ ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆ ಕೂಡ ಹೊಡೆದು ಹೋಗಿದೆ. 
 
ಇನ್ನು ನೀರು ನುಗ್ಗಿದ ಪರಿಣಾಮ ವೃದ್ಧರಿಗೆ ಆಶ್ರಮದಲ್ಲಿರುವುದು ಕಷ್ಟವಾದ ಹಿನ್ನೆಲೆಯಲ್ಲಿ ಆಶ್ರಮದ 25ಕ್ಕೂ ಹೆಚ್ಚು ಮಂದಿ ವೃದ್ಧರನ್ನು ಪಕ್ಕದ ಮತ್ತೊಂದು ಕಟ್ಟಡಕ್ಕೆ ಮಧ್ಯರಾತ್ರಿಯಲ್ಲಿಯೇ ಸ್ಥಳಾಂತರಿಸಲಾಗಿದೆ. ಆಶ್ರಮದ ಸಿಬ್ಬಂದಿಗಳಲ್ಲಿ ಆತಂಕ ಹುಟ್ಟಿಸಿದ್ದು, 4-6 ಅಡಿ ನೀರು ನಿಂತಿದ್ದರೂ ಕೂಡ ಬಿಬಿಎಂಪಿಯ ಯಾವೊಬ್ಬ ಅಧಿಕಾರಿಯೂ ಕೂಡ ಇಲ್ಲಿಯವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದಾಗಿ ಆಶ್ರಮದ ಸಿಬ್ಬಂದಿ ಆರೋಪಿಸುತ್ತಿದ್ದಾರೆ. ಜೊತೆಗೆ ರಾಜಾ ಕಾಲುವೆಯ ಒತ್ತುವರಿ ಪರಿಣಾಮ ಇಂತಹ ಅನಾಹುತಗಳು ಸಂಭವಿಸುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ಮೊದಲು ಒತ್ತುವರಿಯನ್ನು ತೆರವು ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ