ಪುರುಷತ್ವ ಪರೀಕ್ಷೆ, ಧ್ವನಿ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಅಸ್ತು

ಬುಧವಾರ, 3 ಸೆಪ್ಟಂಬರ್ 2014 (11:18 IST)
ಅತ್ಯಾಚಾರ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಿತ್ಯಾನಂದ ಪುರುಷತ್ವ ಮತ್ತು ಧ್ವನಿ ಪರೀಕ್ಷೆಗೆ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿರುವುದರಿಂದ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳುವ ನಿತ್ಯಾನಂದನ ಯತ್ನಕ್ಕೆ ಬ್ರೇಕ್ ಬಿದ್ದಿದೆ.  ನಿತ್ಯಾನಂದ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ಮೇಲಿನ ತೀರ್ಪನ್ನು ನೀಡಿದೆ. ನ್ಯಾ. ರಂಜನ್ ದೇಸಾಯಿ ಮತ್ತು ನ್ಯಾ. ರಮಣ ಪೀಠ ಈ ಆದೇಶವನ್ನು ನೀಡಿದೆ.

ಕಳೆದ ಎರಡೂವರೆ ವರ್ಷಗಳಿಂದ ನಿತ್ಯಾನಂದ ಅನೇಕ ಮೇಲ್ಮನವಿಗಳನ್ನು ಸಲ್ಲಿಸುವ ಮೂಲಕ ಕಾನೂನು ವಿಚಾರಣೆಗೆ ಅಡ್ಡಿ ಮಾಡಿದ್ದರು. ಆದರೆ ಸುಪ್ರೀಂಕೋರ್ಟ್ ಸ್ಪಷ್ಟ ಆದೇಶದ ನಂತರ ವೈದ್ಯಕೀಯ ಪರೀಕ್ಷೆಗಿದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ. ನಿತ್ಯಾನಂದ ಪುರುಷತ್ವ ಪರೀಕ್ಷೆ ಮತ್ತು ಧ್ವನಿ ಪರೀಕ್ಷೆಗೆ ಒಳಪಡಬೇಕೆಂಬ ಹೈಕೋರ್ಟ್ ಆದೇಶವನ್ನು ಈ ಮೂಲಕ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ಅಮೆರಿಕ ವೈದ್ಯರಿಂದ ತಮಗೆ ಡಿಎನ್‌ಎ ಪರೀಕ್ಷೆ ನಡೆದಿದ್ದು, ತಾನು ಒಂದು ಮಗುವಿನಂತೆ, ತನಗೆ ಪುರುಷತ್ವವಿಲ್ಲ ಎಂದು ನಿತ್ಯಾನಂದನ ವಾದವನ್ನು ಸುಪ್ರೀಂಕೋರ್ಟ್ ಒಪ್ಪದೇ ಪುರುಷತ್ವ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿರುವುದರಿಂದ ನಿತ್ಯಾನಂದನ ಬಣ್ಣ ಬಯಲಾಗಲಿದೆ. 

ವೆಬ್ದುನಿಯಾವನ್ನು ಓದಿ