108ರ ವಸಂತಕ್ಕೆ ಕಾಲಿಟ್ಟ ನಡೆದಾಡುವ ದೇವರು: ಆಶೀರ್ವಾದಕ್ಕಾಗಿ ನೂಕು ನುಗ್ಗಲು

ಬುಧವಾರ, 1 ಏಪ್ರಿಲ್ 2015 (12:32 IST)
ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಸಿದ್ದಗಂಗಾ ಮಠದ ಪೀಠಾಧ್ಯಕ್ಷ, ಜಗದ್ಗುರು ಶಿವಕುಮಾರ ಸ್ವಾಮಿ ಅವರು 108ನೇ ವರ್ಷದ ವಸಂತಕ್ಕೆ ಕಾಲಿರಿಸಿದ್ದು, ಶ್ರೀಗಳ ಹುಟ್ಟುಹಬ್ಬವನ್ನು ಇಂದು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಮಠದಲ್ಲಿ ಇಂದು ಸಂಭ್ರಮದ ವಾತಾವರಣ ಮನೆ ಮಾಡಿತ್ತು.
 
ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮಠದ ಹಳೆ ಮಠದ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಶ್ರೀಗಳ ಭಕ್ತ ಸಮೂಹ ಶ್ರೀಗಳಿಗೆ ಪಾದಪೂಜೆ ನೆರವೇರಿಸಿ ದನ್ಯರಾಜರು. ಈ ವೇಳೆ ಶ್ರೀಗಳಿಂದ ಆಶೀರ್ವಾದ ಪಡೆಯಲು ಮುಂದಾಗಿದ್ದ ಜನರ ನಡುವೆ ನೂಕು ನುಗ್ಗಲು ಸಂಭವಿಸಿತ್ತು. 
 
ಇನ್ನು ಪಾದಪೂಜೆ ಕಾರ್ಯಕ್ರಮದಲ್ಲಿ ರಾಜ್ಯದ ವಿಧಾನಸಭಾ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ, ಸಹಕಾರ ಸಚಿವ ಹೆಚ್.ಎಸ್.ಮಹಾದೇವ ಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಮುದ್ದಹನುಮೇಗೌಡ, ಮಾಜಿ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಸೇರಿದಂತೆ ಅನೇಕ ಗಣ್ಯರು ಬಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು.  
 
ಗಣ್ಯರು ಶ್ರೀಗಳಿದ ಆಶೀರ್ವಾದ ಪಡೆದ ಬಳಿಕ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತು ಶ್ರೀಗಳ ಆಶೀರ್ವಾದ ಪಡೆದರು. ಇದೇ ವೇಳೆ ಲಿಂಗಾಯಿತ ಸಮುದಾಯದ ಶ್ರೇಷ್ಠರಾಗಿ ಹೊರಹೊಮ್ಮಿ ತಮ್ಮದೇ ಛಾಪು ಮೂಡಿಸಿ ಇತಿಹಾಸ ಸೃಷ್ಟಿಸಿರುವ ಬಸವಣ್ಣನವರ ಹಾಗೂ ದೇವರ ದಾಸಿಮ್ಮಯ್ಯನವರ ವಚನಗಳನ್ನು ಪಠಿಸಲಾಯಿತು. 
 
ಇಂದು ಎಸ್ಎಸ್ಎಲ್ ಸಿ ಪರೀಕ್ಷ ಇರುವ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾದ ಕಾರ್ಯಕ್ರಮ 9 ಗಂಟೆ ವೇಳೆಗೆ ಅಂತ್ಯವಾಯಿತು. 
 
ಇನ್ನು ಇಂದು ಸಂಜೆ ಮಠದ ಪ್ರೌಢಶಾಲಾ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎನ್ನಲಾಗಿದೆ. ಈ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸೇರಿದಂತೆ ಇತರೆ ಮಠಗಳ ಮಠಾಧೀಶರು, ಗಣ್ಯರು, ಭಕ್ತರು ಹಾಗೂ ಮಠದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 
 

ವೆಬ್ದುನಿಯಾವನ್ನು ಓದಿ