ಕೆರೆ ಒತ್ತುವರಿ: ಕಟ್ಟಡಗಳ ತೆರವಿಗೆ ಮುಂದಾದ ಅಧಿಕಾರಿಗಳು

ಶನಿವಾರ, 2 ಮೇ 2015 (11:41 IST)
ನಗರದ ಬಾಣಸವಾಡಿ ಕೆರೆಯನ್ನು ಒತ್ತುವರಿ ಮಾಡಲಾಗಿದೆ ಎಂಬ ವಿಚಾರ ಹಿನ್ನೆಲೆಯಲ್ಲಿ ನಗರದ ಉತ್ತರ ತಾಲೂಕಿನ ತಹಶಿಲ್ದಾರ್ ಅವರ ನೇತೃತ್ವದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ನಡೆಸಲಾಗುತ್ತಿದ್ದು, ವಾಣಿಜ್ಯ ಕಟ್ಟಡಗಳ ತೆರವು ಕಾರ್ಯ ಭರದಿಂದ ಸಾಗಿದೆ.  
 
ಕಾರ್ಯಾಚರಣೆಯು ತಹಶೀಲ್ದಾರ್ ಹರೀಶ್ ನಾಯಕ್ ಹಾಗೂ ಉತ್ತರ ವಿಭಾಗದ ವಿಭಾಗಾಧಿಕಾರಿ ಮಹೇಶ್ ಬಾಬು ನೇತೃತ್ವದಲ್ಲಿ ನಡೆಯುತ್ತಿದ್ದು, ಇಲ್ಲಿನ ಹೆಚ್ಆರ್‌ಬಿಆರ್ ಲೇಔಟ್‌ನಲ್ಲಿ ಈ ಕೆರೆ ಇದೆ.  ಸುಮಾರು 20 ಎಕರೆಗೂ ಮೀರಿ ಅಕ್ರಮವಾಗಿ ಕೆರೆಯನ್ನು ಒತ್ತುವರಿ ಮಾಡಲಾಗಿದ್ದು, ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಕಂದಾಯ ಇಲಾಖಾಧಿಕಾರಿಗಳು, ಇಂದು ತೆರವಿಗೆ ಮುಂದಾಗಿದ್ದಾರೆ.  
 
ಕಾರ್ಯಾಚರಣೆ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಜಾನ್ಸನ್ ಎಂಬ ಸ್ಥಳೀಯ ನಿವಾಸಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಜಾನ್ಸನ್ ಅವರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. 
 
ಇನ್ನು ಇದೇ ಜಾಗದಲ್ಲಿ 12 ಎಕರೆ ಜಾಗವನ್ನು ಬಿಡಿಎ ಬಳಸಿಕೊಂಡಿದ್ದು, ಲೇಔಟ್ ನಿರ್ಮಿಸಿದೆ. ಈ ಬಗ್ಗೆ ಬಿಡಿಎ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಚರ್ಚಿಸಿ ಆ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇಂದು 2.28 ಗುಂಟೆ ಜಾಗದಲ್ಲಿ ನಿರ್ಮಿಸಿಕೊಂಡಿರುವ ಕಟ್ಟಡಗಳ ತೆರವು ಕಾರ್ಯಚರಣೆ ನಡೆಯುತ್ತಿದೆ.  
 
ಕಾರ್ಯಾಚರಣೆ ವೇಳೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಡಿಸಿಪಿ ಪಿ.ಹರಿಶೇಖರನ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದ್ದು, 300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. 
 
ಕಾರ್ಯಾಚರಣೆಯಲ್ಲಿ 10ಕ್ಕೂ ಹೆಚ್ಚು ಜೆಸಿಬಿಗಳನ್ನು ಬಳಸಿ ಕಾರ್ಯಾಚರಣೆಗೆ ಮುಂದಾಗಿದ್ದು, ಇಂದು ಮೊದಲ ಹಂತವಾಗಿ ವಾಣಿಜ್ಯ ಕಟ್ಟಡಗಳನ್ನು ಮಾತ್ರವೇ ತೆರವುಗೊಳಿಸಲಾಗುತ್ತಿದೆ. ಈಗಾಗಲೇ ಮೂರು ಕಟ್ಟಡಗಳನ್ನು ನೆಲಸಮ ಮಾಡಲಾಗಿದ್ದು, ಇಂದು 70ಕ್ಕೂ ಹೆಚ್ಚು ಕಟ್ಟಡಗಳನ್ನು ತೆರವು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 
ಇಂದು ನಗರದ ಕಾಡುಗೋಡಿಯಲ್ಲಿಯೂ ಕೂಡ ತೆರವು ಕಾರ್ಯಕ್ಕೆ ಮುಂದಾಗಿದ್ದು, 701 ಎಕರೆ ಒತ್ತುವರಿ ಜಾಗದ ತೆರವು ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ