ಎಎಸ್ಎಸ್ಇಟಿಜಡ್ ಕಂಪನಿ ಮೇಲೆ ತೆರಿಗೆ ಅಧಿಕಾರಿಗಳ ದಾಳಿ: ದಾಖಲೆಗಳ ಪರಿಶೀಲನೆ

ಶುಕ್ರವಾರ, 6 ಮಾರ್ಚ್ 2015 (12:42 IST)
30 ಕೋಟಿ ತೆರಿಗೆಯನ್ನು ಸರ್ಕಾರಕ್ಕೆ ವಂಚಿಸಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ ನಗರದ ಎಎಸ್ಎಸ್ಇಟಿಜಡ್ ಪ್ರಾಪರ್ಟಿ ಡೆವಲಪರ್ಸ್ ಕಂಪನಿ ಮೇಲೆ ನಿನ್ನೆ ದಿಢೀರ್ ದಾಳಿ ನಡೆಸಿದ್ದ ವಾಣಿಜ್ಯ ತೆರಿಗೆ ಜಾರಿ ದಳದ ಅಧಿಕಾರಿಗಳು, ಇವತ್ತೂ ಕೂಡ ಅಗತ್ಯ ದಾಖಲೆಗಳ ಪರಿಶೀಲನೆಗಳಲ್ಲಿ ತೊಡಗಿದ್ದಾರೆ. 
 
ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಇಲಾಖೆಯ ಹೆಚ್ಚುವರಿ ಆಯುಕ್ತ ಡಿ.ಕೆ.ರವಿ, 30 ಕೋಟಿ ತೆರಿಗೆಯನ್ನು ವಂಚಿಸುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಎಎಸ್ಎಸ್ಇಟಿಜಡ್ ಪ್ರಾಪರ್ಟಿ ಡೆವಲಪರ್ ಕಂಪನಿ ಮೇಲೆ ದಾಳಿ ನಡೆಸಲಾಗುತ್ತಿದ್ದು, ಕಂಪನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೆ ಸೂಕ್ತವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
 
ಬಳಿಕ, ಕಂಪನಿಯು ಹಮ್ಮಿಕೊಂಡಿರುವ 5 ಪ್ರಾಜೆಕ್ಟ್‌ಗಳಲ್ಲಿ ಈ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದ್ದು, ನಗರದಲ್ಲಿನ ಇನ್‌ಫ್ಯಾಂಟ್ರಿ ರಸ್ತೆಯಲ್ಲಿನ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದಿದ್ದಾರೆ.   
 
ಕಳೆದ ಹಲವು ದಿನಗಳಿಂದ ಹಲು ಕಂಪನಿಗಳ ಮೇಲೆ ದಾಳಿ ನಡೆಸುತ್ತಿರುವ ಇಲಾಖೆ ಅಧಿಕಾರಿಗಳು, ವಂಚಿಸುವ ಕಂಪನಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. 
 

ವೆಬ್ದುನಿಯಾವನ್ನು ಓದಿ