ಘೋರ:ಸಂಪೂರ್ಣ ಕುಟುಂಬದ ಸಾಮೂಹಿಕ ಆತ್ಮಹತ್ಯೆ

ಬುಧವಾರ, 24 ಫೆಬ್ರವರಿ 2016 (09:29 IST)
ತನ್ನ ನಾಲ್ವರು ಮಕ್ಕಳೊಂದಿಗೆ ಶಿಕ್ಷಕಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ  ನಾಗಮಂಗಲ ಸಮೀಪದ ಮಾರದೇವನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
 
ಮೃತರನ್ನು ಮೀನಾಕ್ಷಮ್ಮ (48), ಮಕ್ಕಳಾದ ಯೋಗಶ್ರೀ(25), ಪದ್ಮಾ(23), ಸುಚಿತ್ರಾ(21), ಮಂಜೇಗೌಡ (14) ಎಂದು ಗುರುತಿಸಲಾಗಿದೆ. 
 
ಮೀನಾಕ್ಷಮ್ಮ ಅವರ ಹಿರಿಯ ಮಗಳು ಯೋಗಶ್ರೀಯನ್ನು ಕಳೆದ ನಾಲ್ಕು ತಿಂಗಳ ಹಿಂದೆ ತುರುವೇಕೆರೆ ತಾಲೂಕಿನ ಕಡಬ ಗ್ರಾಮದ ಉಮೇಶ್ ಎಂಬುವವನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆರಂಭದಲ್ಲಿ ಪತ್ನಿಯನ್ನು ಚೆನ್ನಾಗಿ ನೋಡಿಕೊಂಡ ಉಮೇಶ್ ಇತ್ತೀಚಿಗೆ ಪತ್ನಿಯ ಮೇಲೆ ದೌರ್ಜನ್ಯವೆಸಗುತ್ತಿದ್ದ ಎಂದು ತಿಳಿದು ಬಂದಿದೆ. 
 
ಇದರಿಂದ ತೀರ್ವ ನೊಂದಿದ್ದ ಯೋಗಶ್ರೀ ತವರಿಗೆ ಬಂದು ಎಲ್ಲ ವಿಷಯವನ್ನು ತಿಳಿಸಿದ್ದಾಳೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಮೀನಾಕ್ಷಮ್ಮ ಅವರ ಪತಿ ಸಹ 2 ತಿಂಗಳ ಹಿಂದೆ ಮೃತ ಪಟ್ಟಿದ್ದರು. ಅದೇ ನೋವಿನಲ್ಲಿದ್ದ ಮೀನಾಕ್ಷಮ್ಮ ಕುಟುಂಬ ಯೋಗಶ್ರೀಗೆದುರಾದ ನೋವಿನಿಂದ ಮತ್ತಿಷ್ಟು ಆಘಾತಗೊಂಡಿದೆ. ಈ ಹಿನ್ನೆಲೆಯಲ್ಲಿ ಐವರೂ ಡೆತ್‌ನೋಟ್ ಬರೆದಿಟ್ಟು  ಸಾಮೂಹಿಕವಾಗಿ ನೇಣಿಗೆ ಶರಣಾಗಿದ್ದಾರೆ.ಮಂಗಳವಾರ ಬೆಳಗ್ಗೆ ಗ್ರಾಮಸ್ಥರಿಗೆ ಈ ಘೋರ ದುರಂತದ ಮಾಹಿತಿ ಲಭಿಸಿದೆ. 
 
ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
 
ಮೀನಾಕ್ಷಮ್ಮ  ಡೆತ್‌ನೋಟ್‌ನಲ್ಲಿ  ತಮ್ಮ ಸಂಪೂರ್ಣ ಆಸ್ತಿಯನ್ನು ಶ್ರೀರಂಗಪಟ್ಟಣ ಬಳಿಯಿರುವ ಶ್ರೀ ಸಾಯಿಬಾಬಾ ಅನಾಥಾಶ್ರಮದ ಹೆಸರಿಗೆ ವರ್ಗಾಯಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಜತೆಗೆ, ಎಲ್ಲರನ್ನು ಪತಿ ರಾಮೇಗೌಡ ಸಮಾಧಿ ಬಳಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡಬೇಕೆಂದು ಮನವಿ ಮಾಡಿದ್ದರು. 
 
ಘಟನೆಯಿಂದ ಗ್ರಾಮದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಉಮೇಶ್‌ನನ್ನು ಬಂಧಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಆತನನ್ನು ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ