ರಕ್ತದ ಕೋಡಿ ಹರಿಯುತ್ತಿದ್ದರೂ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ ಟೆಕ್ಕಿ

ಗುರುವಾರ, 21 ಆಗಸ್ಟ್ 2014 (19:40 IST)
24 ವರ್ಷ ವಯಸ್ಸಿನ ನಸೀರ್ ತೀವ್ರ ನೋವಿನಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಕೆಲವೇ ನಿಮಿಷಗಳ ಕೆಳಗೆ ಚಲಿಸುತ್ತಿದ್ದ ರೈಲು ಅವನ ಕಾಲುಗಳ ಮೇಲೆ ಹರಿದಿತ್ತು. ರಕ್ತದ ಮಡುವಿನಲ್ಲಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಟೆಕ್ಕಿಯ ಎರಡೂ ಕಾಲುಗಳು ಸಣ್ಣ ಚರ್ಮದ ಪದರಗಳಿಂದ ಜೋತಾಡುತ್ತಿತ್ತು.ಅಂತಹ ಪರಿಸ್ಥಿತಿಯಲ್ಲೂ ಧೈರ್ಯ ಕಳೆದುಕೊಳ್ಳದೇ,   ಮೊಬೈಲ್‌ನಿಂದ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ತನಗೆ ಅಪಘಾತವಾಗಿರುವುದಾಗಿ ತಿಳಿಸಿದ. 40 ನಿಮಿಷಗಳ ನಂತರ ಅವನನ್ನು ಆಸ್ಪತ್ರೆಗೆ ಸೇರಿಸಲಾಯಿತು.

ವೈದ್ಯರು ಒಂದು ಕಾಲನ್ನು ಉಳಿಸಲು ಯಶಸ್ವಿಯಾಗಿದ್ದರೂ ಇನ್ನೊಂದು ಕಾಲು ಕತ್ತರಿಸಲಾಯಿತು. ನಸೀರ್  ಅಹ್ಮದ್  ಅಂತಹ ಸಂದಿಗ್ಧ ಕಾಲದಲ್ಲಿ ಧೃತಿಗೆಡದೇ ಮನಸ್ಥೈರ್ಯವನ್ನು ಕಾಪಾಡಿಕೊಂಡಿದ್ದು ವೈದ್ಯರನ್ನು ಅಚ್ಚರಿಸಿಗೊಳಿಸಿದೆ. ರಕ್ತದ ಕೋಡಿ ಹರಿಯುತ್ತಿದ್ದರೂ, ತೀವ್ರ ನೋವಿನಿಂದ ಬಳಲುತ್ತಿದ್ದರೂ 108ಕ್ಕೆ ಕರೆ ಮಾಡಿ, ಆಂಬ್ಯುಲೆನ್ಸ್ ಚಾಲಕನಿಗೆ ಎಲ್ಲಿಗೆ ಬರಬೇಕೆಂಬ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದ.ನಸೀರ್ ಇಂದಿರಾನಗರದ ಐಟಿ ಕಂಪೆನಿಯಲ್ಲಿ ಟೆಕ್ಕಿಯಾಗಿದ್ದ. ಸುಮಾರು ಒಂದು ತಿಂಗಳ ಹಿಂದೆ ಜುಲೈ 20ರಂದು ಮೈಸೂರಿನಲ್ಲಿ ತನ್ನ ಸ್ನೇಹಿತನ ಜೊತೆ ಕಳೆಯಲು ಬಯಸಿ ರೈಲು ಏರಿದ್ದ ಅವನಿಗೆ ಸೆಕೆಯಾದಂತೆ ಭಾವಿಸಿ  ತಾಜಾ ಗಾಳಿಯನ್ನು ಪಡೆಯಲು ಬಾಗಿಲ ಬಳಿ ನಿಂತ.

ಕೆಲವೇ ಮೀಟರ್ ದೂರ ರೈಲು ಚಲಿಸುವಷ್ಟರಲ್ಲಿ ಅವನ ಕಾಲು ರೈಲಿನಿಂದ ಕೆಳಕ್ಕೆ  ಜಾರಿ ಹಳಿಗಳ ಮೇಲೆ ಬಿದ್ದಿದ್ದ. ರೈಲು ಮುಂದೆ ಚಲಿಸಿದ ಮೇಲೆ ನೋಡಿದಾಗ ಅವನ ಕಾಲುಗಳು ಚರ್ಮದಿಂದ ನೇತಾಡುತ್ತಿತ್ತು. ಸಹಾಯಕ್ಕಾಗಿ ಸುತ್ತಲೂ  ಯಾರೂ ಇರಲಿಲ್ಲ. ನಸೀರ್ ಪ್ಲಾಟ್‌ಫಾರಂ ಮೇಲೆ ಹತ್ತಿ ಮೊಬೈಲ್‌ನಲ್ಲಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಬರುವಂತೆ ಸೂಚಿಸಿದ.

ಬಳಿಕ ತನ್ನ ಸ್ನೇಹಿತನಿಗೆ ಕರೆ ಮಾಡಿ ಘಟನೆ ಮಾಹಿತಿ ನೀಡಿದ. ಸುಮಾರು 40 ನಿಮಿಷಗಳ ಕಾಲ ಆಂಬ್ಯುಲೆನ್ಸ್‌ಗಾಗಿ ಕಾಯುತ್ತಾ ಪ್ಲಾಟ್‌ಫಾರಂ ಮೇಲೆ ಕೂತಿದ್ದ. ನಂತರ ಅವನನ್ನು ಬೌರಿಂಗ್ ಆಸ್ಪತ್ರೆಗೆ ಅಲ್ಲಿಂದ ಹೊಸ್‌ಮ್ಯಾಟ್‌ಗೆ ಹೆಚ್ಚಿನ ಚಿಕಿತ್ಸೆಗೆ ಸೇರಿಸಲಾಯಿತು. ಅವನು ಆಸ್ಪತ್ರೆಗೆ ಬಂದಾಗ, ಅವನ ಕಾಲು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ನಾಯುಗಳು ಮತ್ತು ರಕ್ತನಾಳಗಳಿಗೆ ಹಾನಿಯಾಗಿತ್ತು. ಎರಡೂ ಕಾಲುಗಳು ಚರ್ಮಕ್ಕೆ ಅಂಟಿಕೊಂಡು ನೇತಾಡುತ್ತಿತ್ತು. ವಿಶೇಷ ಮೈಕ್ರೋಸ್ಕೋಪ್ ಬಳಸಿ ವೈದ್ಯರು ನರಗಳು, ರಕ್ತನಾಳಗಳು ಮತ್ತು ಸ್ನಾಯುಗಳನ್ನು ಪುನರ್ರಚನೆ ಮಾಡಿ ಕಸಿ ಮಾಡಿದರು.  ಮುರಿದ ಮೂಳೆಗಳನ್ನು ಜೋಡಿಸಿದರು. ಎಡಗಾಲು ಸಂಪೂರ್ಣ ಹಾನಿಯಾಗಿದ್ದರಿಂದ ಕತ್ತರಿಸಲಾಯಿತು ಎಂದು ಶಸ್ತ್ರಚಿಕಿತ್ಸೆ ಮಾಡಿದ ಡಾ. ಪ್ರದೀಪ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ