ಮೈಸೂರಿನಲ್ಲಿ ಭೀಕರ ಅಪಘಾತ: 9 ಮಂದಿ ದುರ್ಮರಣ

ಬುಧವಾರ, 14 ಮೇ 2014 (08:46 IST)
ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಟೆಂಪೋ ಟ್ರಾವೆಲರ್ ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯ ಪರಿಣಾಮ 9 ಜನ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
 
ಮೈಸೂರಿನ ಪಿರಿಯಾಪಟ್ಟಣದ ಕಂಪ್ಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಸುಕಿನ ಜಾವದಲ್ಲಿ ಘಟನೆ ನಡೆದಿದ್ದು, ಮೂಲತಃ ಮಂಗಳೂರಿನವರಾದ ಟೆಂಪೋ ಟ್ರಾವೆಲ್ ಪ್ರಯಾಣಿಕರು ತಮಿಳುನಾಡಿಗೆ ಪ್ರವಾಸಕ್ಕೆ ಹೋಗಿ ವಾಪಸ್ಸಾಗುತ್ತಿದ್ದರು.
 
ಟೆಂಪೋ ಟ್ರಾವೆಲ್‌ನಲ್ಲಿ ಒಟ್ಟು 20 ಜನ ಪ್ರಯಾಣಿಸುತ್ತಿದ್ದು, ಚಾಲಕ ಸೇರಿದಂತೆ 9 ಜನ ಸಾವಿಗೀಡಾಗಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು, ಮೂವರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದ್ದಾರೆ. 11 ಜನ ತೀವೃವಾಗಿ ಗಾಯಗೊಂಡಿದ್ದಾರೆ
 
ಗಾಯಾಳುಗಳನ್ನು ಪಿರಿಯಾಪಟ್ಟಣದ  ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
 
ಎರಡು ವಾಹನಗಳು ಕೂಡ ಅತಿ ವೇಗದಿಂದ ಚಲಾಯಿಸುತ್ತಿದ್ದುದು, ಮತ್ತು ಚಾಲಕ ಮಂಪರುನಲ್ಲಿದ್ದುದು ಅಪಘಾತಕ್ಕೆ ಕಾರಣವಾಗಿರಬಹುದು, ಅಲ್ಲದೇ ರಸ್ತೆ ಕಿರಿದಾಗಿದ್ದು ಇಲ್ಲಿ ಅಪಘಾತಗಳು ನಡೆಯುವುದು ಸಾಮಾನ್ಯ. ರಸ್ತೆ ಅಗಲೀಕರಣ ಮಾಡಿ ಎಂದು ಹಲವು ಸಲ ಪ್ರತಿಭಟನೆ ಮಾಡಲಾಗಿದ್ದು, ಮನವಿ ಸಲ್ಲಿಸಲಾಗಿದೆ ಎಂದು ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 
 
ಲಾರಿ ಚಾಲಕ ಮತ್ತು ನಿರ್ವಾಹಕ ಅಪಾಯದಿಂದ ಪಾರಾಗಿದ್ದು ಅವರನ್ನು ಪೋಲಿಸರು ಬಂಧಿಸಿದ್ದಾರೆ.  ಪಿರಿಯಾಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ