ಕರ್ನಾಟಕ ಬಂದ್‌ನಲ್ಲಿ ಶಾಂತಿ ಕಾಪಾಡಿದ್ದಕ್ಕೆ ಧನ್ಯವಾದಗಳು: ಸಿಎಂ

ಶುಕ್ರವಾರ, 9 ಸೆಪ್ಟಂಬರ್ 2016 (19:23 IST)
ಶಾಂತಿ ಕಾಪಾಡುವ ಮನವಿಗೆ ರಾಜ್ಯದ ಜನತೆ ಸ್ಪಂದಿಸಿದ್ದಾರೆ, ಕರ್ನಾಟಕ ಬಂದ್ ಶಾಂತಿಯುತವಾಗಿತ್ತು. ರಾಜ್ಯದ ಜನತೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶ ಪಾಲನೆ ಕಷ್ಟದ ಕೆಲಸ. ಆದೇಶ ಪಾಲನೆ ಮಾಡಿದರೆ ಕುಡಿಯುವ ನೀರಿಗೆ ತೊಂದರೆ ಎದುರಾಗುತ್ತದೆ. ಆದೇಶ ಪಾಲನೆ ಮಾಡದಿದ್ದರೆ ನ್ಯಾಯಾಂಗ ನಿಂದನೆ ಎದುರಿಸುವಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ತಿಳಿಸಿದ್ದಾರೆ.
 
ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲಾಗಿದ್ದು ಮೂರು ರಾಜ್ಯಗಳ ಸಿಎಂಗಳ ಸಭೆ ಕರೆಯುವಂತೆ ಮನವಿ ಮಾಡಲಾಗಿದೆ.ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಸಮಸ್ಯೆಯನ್ನು ಪರಿಹರಿಸುವಂತೆ ಕೋರಲಾಗಿದೆ ಎಂದು ಹೇಳಿದ್ದಾರೆ.
 
ಕೆಆರ್‌ಎಸ್ ಡ್ಯಾಂ ಬಳಿ ತಳ್ಳಾಟ ನೂಕಾಟದಲ್ಲಿ ಕೆಲವರಿಗೆ ಗಾಯಗಳಾಗಿವೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಪೊಲೀಸರಿಗೆ ಲಾಠಿ ಚಾರ್ಜ್ ಮಾಡುವ ಯಾವುದೇ ಉದ್ದೇಶವಿರಲಿಲ್ಲ ಎಂದು ತಿಳಿಸಿದ್ದಾರೆ.
 
ಕಳೆದ 32 ವರ್ಷಗಳಿಂದಲೂ  ವಕೀಲ ಫಾಲಿ. ಎಸ್. ನಾರಿಮನ್ ಕರ್ನಾಟಕದ ಪರ ವಾದಿಸುತ್ತಿದ್ದಾರೆ. ನಾರಿಮನ್ ಅವರನ್ನು ಬದಲಿಸಬೇಕು ಎನ್ನುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವಾದದಲ್ಲಿ ಹುರುಳಿಲ್ಲ. ಕಳೆದ 2007ರಲ್ಲಿ ಈಶ್ವರಪ್ಪ ಜಲಸಂಪನ್ಮೂಲ ಸಚಿವರಾಗಿದ್ದಾಗ ಯಾಕೆ ನಾರಿಮನ್ ಅವರನ್ನು ಬದಲಿಸಲಿಲ್ಲ ಎಂದು ತಿರುಗೇಟು ನೀಡಿದರು.   
 
ಮಾಜಿ ಪ್ರಧಾನಿ ದೇವೇಗೌಡ ನಾರಿಮನ್‌ರನ್ನು ಇಂದು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ದೇವೇಗೌಡರಿಗಿಂತ ಈಶ್ವರಪ್ಪ ಬುದ್ದಿವಂತರೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ