ಅದು ರೈತರ ಚೈತನ್ಯ ಯಾತ್ರೆಯಲ್ಲ, ಬಿಜೆಪಿ ಚೈತನ್ಯ ಯಾತ್ರೆ: ಸಿದ್ದರಾಮಯ್ಯ

ಗುರುವಾರ, 1 ಅಕ್ಟೋಬರ್ 2015 (15:36 IST)
ರಾಜ್ಯ ಬಿಜೆಪಿ ಘಟಕವು ರಾಜ್ಯದಲ್ಲಿ ರೈತ ಚೈತನ್ಯ ಯಾತ್ರೆಯನ್ನು ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ಪ್ರತಿಕ್ರಿಯಿಸಿದ್ದು, ಬಿಜೆಪಿಯವರು ಮಾಡುತ್ತಿರುವ ರೈತರ ಚೈತನ್ಯ ಯಾತ್ರೆ ರೈತಗಾಗಿ ಹಮ್ಮಿಕೊಳ್ಳುತ್ತಿರುವುದಲ್ಲ, ಬದಲಾಗಿ ಅದು ಬಿಜೆಪಿಯ ಚೈತನ್ಯ ಯಾತ್ರೆ ಎಂದು ವ್ಯಂಗ್ಯವಾಡಿದರು.
 
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ರೈತರ ಶ್ರೇಯೋಭಿವೃದ್ಧಿಗಾಗಿ ಹಾಗೂ ಆತ್ಮಹತ್ಯೆಯನ್ನು ತಡೆಗಟ್ಟುವ ಸಲುವಾಗಿ ರೈತ ಚೈತನ್ಯ ಯಾತ್ರೆಯನ್ನು ನಡೆಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅದು ನಿಜವಾಗಿಯೂ ರೈತ ಚೈತನ್ಯ ಯಾತ್ರೆಯಲ್ಲ. ಬದಲಾಗಿ ಬಿಜೆಪಿ ಚೈತನ್ಯ ಯಾತ್ರೆ ಎಂದು ಕುಹಕವಾಡಿದ ಅವರು, ಯಡಿಯೂರಪ್ಪ ಅವರು ತಮ್ಮ ವಿರುದ್ಧ ಸಾಕಷ್ಟು ಕೇಸುಗಳು ದಾಖಲಾಗಿದ್ದು, ಅವರದ್ದೇ ಪಕ್ಷದ ಸರ್ಕಾರವಿದ್ದರೂ ಕೂಡ ಸೂಕ್ತ ಸ್ಥಾನಮಾನದಲ್ಲಿಲ್ಲ. ಇದರಿಂದ ಹತಾಶರಾಗಿದ್ದು, ಅವರಿಗೆ ಅವರದ್ದೇ ಪಕ್ಷದಲ್ಲಿ ಸಹಕಾರವೂ ಇಲ್ಲದಂತಾಗಿದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  
 
ಇದೇ ವೇಳೆ, ರಾಜ್ಯದಲ್ಲಿ ಕೇಂದ್ರ ಸರ್ಕಾರವೇ ಹೆಚ್ಚು ಸಾಲ ನೀಡುತ್ತಿದೆ. ರೈತರ ಸಾಲವನ್ನು ಕೇಂದ್ರವೇ ಮನ್ನಾ ಮಾಡಬಹುದಲ್ಲ. ಈ ಬಗ್ಗೆ ಯಡಿಯೂರಪ್ಪನವರು ಕೇಂದ್ರಕ್ಕೆ ಹೇಳಲಿ, ಕೇಂದ್ರಕ್ಕೆ ಸರ್ವ ಪಕ್ಷಗಳ ನಿಯೋಗ ಕರೆದೊಯ್ದರೆ ಅವರು ಬಾಯೇ ಬಿಡುವುದಿಲ್ಲ ಎಂದು ಆರೋಪಿಸಿದರು.   
 
ಇನ್ನು ಬಿಜೆಪಿ ನಾಯಕರು ಬಳ್ಳಾರಿ ನಗರದಲ್ಲಿ ಇಂದು ಎರಡನೇ ಹಂತದ ರೈತ ಚೈತನ್ಯ ಯಾತ್ರೆಯನ್ನು ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ಮಾಜಿ ಸಿಎಂ, ಸಂಸದ ಯಡಿಯೂರಪ್ಪ ಕೂಡ ಭಾಗವಿಹಿಸಿದ್ದರು. ಈ ವೇಳೆ ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ ಅವರು ರೈತರ ಸಾಲವನ್ನು ಸಿದ್ದರಾಮಯ್ಯ ಮನ್ನಾ ಮಾಡಿಲ್ಲ. ಕೇವಲ ಬಡ್ಡಿ ಮನ್ನಾ ಮಾಡಿದ್ದಾರೆ. ಹಾಗಾಗಿ ಸಾಲವನ್ನು ಮೊದಲು ಮನ್ನಾ ಮಾಡಲಿ ಎಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಮೊದಲ ಹಂತದ ಯಾತ್ರೆಯನ್ನು ಮೈಸೂರಿನಲ್ಲಿ ನಡೆಸಲಾಗಿತ್ತು.  

ವೆಬ್ದುನಿಯಾವನ್ನು ಓದಿ