ಸರ್ಕಾರ ಖಾಲಿ ಗೋದಾಮಿಗೆ ಬೀಗ ಜಡಿಯುತ್ತಿದೆ: ಲಕ್ಷ್ಮಣ್ ಸವದಿ

ಮಂಗಳವಾರ, 7 ಜುಲೈ 2015 (12:53 IST)
ವಿಧಾನಸಭೆಯಲ್ಲಿ ಇಂದು ನಡೆಯುತ್ತಿರುವ ಕಲಾಪದಲ್ಲಿ ರಾಜ್ಯದ ಸಹಕಾರ ಇಲಾಖೆ ಬಗ್ಗೆ ಪ್ರಸ್ತಾಪವಾಗಿದ್ದು, ಸರ್ಕಾರ ಖಾಲಿ ಇರುವ ಸಕ್ಕರೆ ಗೋದಾಮುಗಳಿಗೆ ಬೀಗ ಜಡಿಯುವ ನಾಟಕವಾಡುತ್ತಿದ್ದು, ಕಬ್ಬು ಬೆಳೆಗಾರರನ್ನು ಶೋಷಿಸುತ್ತಿದೆ ಎಂದು ಬಿಜೆಪಿ ಸದಸ್ಯ ಲಕ್ಷ್ಮಣ್ ಸವದಿ ಅವರು ಸರ್ಕಾರವನ್ನು ಆರೋಪಿಸಿದರು. 
 
ಸದನದಲ್ಲಿ ಮಾತನಾಡಿದ ಅವರು, ಸರ್ಕಾರ ಸಕ್ಕರೆ ಎಲ್ಲಾ ಖಾಲಿಯಾಗಿ ಖಾಲಿ ಉಳಿದಿರುವ ಗೋದಾಮುಗಳಿಗೆ ಬೀಗಮುದ್ರೆ ಜಡಿಯುವ ನಾಟಕವಾಡುತ್ತಿದೆ. ಈ ಮೂಲಕ ಕಬ್ಬು ಬೆಳೆಗಾರರನ್ನು ತೀವ್ರವಾಗಿ ಶೋಷಿಸುತ್ತಿದೆ ಎಂದು ಆರೋಪಿಸಿದರು. 
 
ಇದಕ್ಕೆ ಪ್ರತಿಕ್ರಿಯಿಸಿದ ಸಹಕಾರ ಸಚಿವ ಹೆಚ್.ಎಸ್.ಮಹಾದೇವಪ್ರಸಾದ್ ಹಾಗೂ ಆಡಳಿತ ಪಕ್ಷಗಳ ಸದಸ್ಯರು ಅಂತಹ ಗೋದಾಮುಗಳಿದ್ದಲ್ಲಿ ಪ್ರಸ್ತುತಪಡಿಸಿ ಎಂದು ಒತ್ತಾಯಿಸಿದರು. ಒತ್ತಾಯಕ್ಕೆ ಮಣಿದ ಸವದಿ, ಬಾಗಲಕೋಟೆಯ ಸತೀಶ್ ಜಾರಕಿಹೋಳಿ ಒಡೆತನದಲ್ಲಿರುವ ಘಟಪ್ರಭಾ ಸಕ್ಕರೆ ಖಾರ್ಖಾನೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಅದು ಖಾಲಿ ಗೋದಾಮು ಎಂದು ಆರೋಪಿಸಿದರು. 
 
ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಹಾಗೇನಾದರೂ ಇದ್ದರೆ ಪರಿಶೀಲಿಸಿ ಸಚಿವರೇ, ಏಕೆಂದರೆ ಅದು 420 ಕೆಲಸ ಎಂದು ಸಚಿವರಿಗೆ ತಿಳಿಸಿ ಕುಟುಕಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸಚಿವರು, ಸರ್ಕಾರ ವಶಕ್ಕೆ ಪಡೆದಿರುವ ಕಾರ್ಖಾನೆಗಳ ಪಟ್ಟಿಯಲ್ಲಿ ಘಟಪ್ರಭಾ ಕಾರ್ಖಾನೆ ಇರಲಿಲ್ಲ. ಪ್ರಸ್ತುತ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸುತ್ತೇನೆ ಎಂಬುದಾಗಿ ಸ್ಪೀಕರ್‌ಗೆ ಸ್ಪಷ್ಟನೆ ನೀಡಿದರು. 

ವೆಬ್ದುನಿಯಾವನ್ನು ಓದಿ