ಜುಲೈ 2ರಂದು ನಡೆಯಲಿರುವ ಸಭೆಯಲ್ಲಿ ಗೊಂದಲಗಳಿಗೆ ತೆರೆ: ಯಡಿಯೂರಪ್ಪ

ಗುರುವಾರ, 30 ಜೂನ್ 2016 (18:35 IST)
ಮುಂಬರುವ ಜುಲೈ 2 ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು ಎಲ್ಲಾ ಶಾಸಕರು ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿರುವುದರಿಂದ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
 
ಪದಾಧಿಕಾರಿಗಳ ನೇಮಕದಲ್ಲಿ ತಾರತಮ್ಯವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು ಪದಾಧಿಕಾರಿಗಳ ನೇಮಕದಲ್ಲಿ ಯಾವುದೇ ಪಕ್ಷಪಾತವಾಗಿಲ್ಲ. ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ತಿಳಿಸಿದ್ದಾರೆ.
 
ರಾಜ್ಯ ಬಿಜೆಪಿ ದಿನೇ ದಿನೇ ಗೊಂದಲದ ಗೂಡಾಗುತ್ತಿರುವುದರಿಂದ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧರಿಸಿದ್ದೇನೆ. ಅರ್ಹರಾದ ಕಾರ್ಯಕರ್ತರಿಗೆ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ಪದಾಧಿಕಾರಿಗಳ ನೇಮಕದಲ್ಲಿ ಕೆಲ ಮಟ್ಟಿನ ಗೊಂದಲಗಳಿವೆ. ಅವುಗಳನ್ನು ಶೀಘ್ರದಲ್ಲಿಯೇ ಪರಿಹರಿಸಿಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದರೆ,  ಪದಾಧಿಕಾರಿಗಳ ನೇಮಕದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಯಡಿಯೂರಪ್ಪ ತಿರುಗೇಟು ನೀಡಿದ್ದರು.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಇತರ ಬಿಜೆಪಿ ನಾಯಕರ ನಡುವಿನ ಭಿನ್ನಮತ ಯಾವ ಹಂತಕ್ಕೆ ಕೊಂಡೊಯುತ್ತದೆಯೋ ಕಾದು ನೋಡಬೇಕಾಗಿದೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ