ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಹತ್ಯೆ

ಗುರುವಾರ, 5 ಮಾರ್ಚ್ 2015 (11:33 IST)
ಕಳ್ಳತನಕ್ಕೆ ವಿರೋಧಿಸಿದ ದೇವಸ್ಥಾನದ ಕಾವಲುಗಾರನೋರ್ವನನ್ನು ಕಳ್ಳರು ನಿನ್ನೆ ರಾತ್ರಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಎಂಬ ಗ್ರಾಮದ ದೇವಾಲಯದಲ್ಲಿ ನಡೆದಿದೆ. 
 
ಈ ಕೃತ್ಯವು ಸಿದ್ದರಾಮೇಶ್ವರ ದೇವಾಲಯದಲ್ಲಿ ನಡೆದಿದ್ದು, ಹತ್ಯೆಗೊಳಗಾದ ಕಾವಲುಗಾರನ್ನು ಈಶ್ವರಪ್ಪ(35) ಎಂದು ಹೇಳಲಾಗಿದೆ. ದೇವಸ್ತಾನದ ಕಾವಲುಗಾರನಾಗಿ ನೇಮಕಗೊಂಡಿದ್ದ ಹಿನ್ನೆಲೆಯಲ್ಲಿ ಈಶ್ವರಪ್ಪ ಎಂದನಂತೆ ನಿನ್ನೆ ರಾತ್ರಿಯೂ ಕೂಡ ಕಾವಲಿದ್ದ. ಈ ವೇಳೆ ದೇವಸ್ತಾನದ್ಲಲಿನ ಹುಂಡಿಯನ್ನು ಕದಿಯಲು ಕಳ್ಳರು ಬಂದಿದ್ದರು ಎನ್ನಲಾಗಿದ್ದು, ಇದಕ್ಕೆ ಕಾವಲುಗಾರ ಈಶ್ವರಪ್ಪ ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಕಳ್ಳರು, ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾರೆ. 
 
ದೇವಸ್ತಾನವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಸಾಕಷ್ಟು ಆದಾಯ ಸಂಗ್ರಹವಾಗುತ್ತಿತ್ತು. ಈ ವಿಷಯವನ್ನರಿತ ಕಳ್ಳರು ಕಳ್ಳತನಕ್ಕೆ ಯತ್ನಿಸಿ ಈ ಹೀನ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. 
 
ಇನ್ನು ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಸಾರ್ವಜನಿಕರು, ಈ ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ಈ ಹಿಂದೆಯೂ ಕೂಡ ಇಂತಹ ಕೃತ್ಯಗಳು ಇದೇ ದೇವಾಲಯದಲ್ಲಿ ನಡೆದಿದ್ದವು. ಆದರೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. 
 
ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ವಿಧಿ ವಿಜ್ಞಾನ ಸಿಬ್ಬಂದಿಯೊಂದಿಗೆ ಭೇಟಿ ನೀಡಿರುವ ನಗರ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ