ದೇವಸ್ಥಾನದ ಮೂರನೇ ಬಾಗಿಲು ತೆರೆದಾಗ ತಂದಿಟ್ಟಿತು ಸಂಕಟ

ಮಂಗಳವಾರ, 1 ಜುಲೈ 2014 (12:17 IST)
ಬೆಂಗಳೂರಿನ ಕುರುಮಾರಿಯಮ್ಮ ದೇವಾಲಯದ ಮೂರನೇ ಬಾಗಿಲು ಈಗ ಅಕ್ಕಪಕ್ಕದ ಮನೆಯವರಿಗೆ ಸಂಕಷ್ಟ ತಂದಿದೆ. ಬೆಂಗಳೂರಿನ ಶ್ರೀರಾಂಪುರ ರಸ್ತೆಯಲ್ಲಿರುವ ಕುರುಮಾರಿಯಮ್ಮ ದೇವಾಲಯದಲ್ಲಿ ವಾಸ್ತು ಪ್ರಕಾರ ಮೂರನೇ ಬಾಗಿಲು ನಿರ್ಮಿಸಿರುವುದರಿಂದ ಪೂಜಾ ಹೋಮ, ಹವನದ ಸಂದರ್ಭದಲ್ಲಿ ಹೊಗೆ ದಟ್ಟವಾಗಿ ಆವರಿಸಿ ತಮಗೆ ತೊಂದರೆಯಾಗುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಹೇಳುತ್ತಾರೆ.

ಆದರೆ ಕಳೆದ 30 ವರ್ಷಗಳಿಂದ ಇದು ಅನೂಚಾನವಾಗಿ ನಡೆಯುತ್ತಿದ್ದು, ಯಾವುದೇ ತೊಂದರೆಯಾಗುತ್ತಿಲ್ಲ ಎಂದು ಆಡಳಿತ ಮಂಡಳಿ ಹೇಳುತ್ತಿದೆ. ದೇವಸ್ಥಾನಕ್ಕೆ ಉತ್ತರಾಭಿಮುಖವಾಗಿ ಮುಖ್ಯದ್ವಾರವಿತ್ತು. ದೇವಸ್ಥಾನದ ಆಡಳಿತ ಮಂಡಳಿಗೆ ವಾಸ್ತುತಜ್ಞರು ಪೂರ್ವಾಭಿಮುಖವಾಗಿ ಮತ್ತೊಂದು ಬಾಗಿಲು ನಿರ್ಮಿಸಬೇಕೆಂದು ಹೇಳಿದಾಗ ಮೂರನೇ ಬಾಗಿಲನ್ನು ನಿರ್ಮಿಸಿದ್ದರು.

ಪ್ರತಿಶುಕ್ರವಾರ ವಿಶೇಷ ಪೂಜೆ ನಡೆಯುತ್ತಿದ್ದು, ಮೂರನೇ ಬಾಗಿಲಿನ ಮೂಲಕವೇ ಭಕ್ತರು ಓಡಾಡುತ್ತಿದ್ದು, ನಮಗೆ ತುಂಬಾ ತೊಂದರೆಯಾಗಿದೆ ಎಂದು ಅಕ್ಕಪಕ್ಕದ ಮನೆಯವರು ದೂರಿದ್ದಾರೆ. ನಮ್ಮ ಮಗುವೊಂದು ಕೆಲವು ವರ್ಷಗಳ ಹಿಂದೆ ಹೊಗೆಯಿಂದ ಉಸಿರುಕಟ್ಟಿ ಸಾವನ್ನಪ್ಪಿದೆ ಎಂದು ಕೂಡ ದೂರಿದ್ದಾರೆ. ಇನ್ನೊಂದು ಮಗು ಕೂಡ ಅಸ್ವಸ್ಥತೆಯಿಂದ ನರಳುತ್ತಿದೆ ಎಂದು ಅವರು ದೂರಿದ್ದಾರೆ. 

ವೆಬ್ದುನಿಯಾವನ್ನು ಓದಿ