ಅಧಿಕಾರಿಗೆ ಬೆದರಿಕೆ ಆರೋಪ: ಪೊಲೀಸರನ್ನು ಭೇಟಿ ಮಾಡಿದ ಶಾಸಕ ವರ್ತೂರು ಪ್ರಕಾಶ್

ಭಾನುವಾರ, 26 ಏಪ್ರಿಲ್ 2015 (16:25 IST)
ಅಕ್ರಮ ಮರಳು ಲಾರಿಗಳನ್ನು ಬಿಡುಗಡೆ ಮಾಡುವಂತೆ ಬೆದರಿಕೆ ಹಾಕಿದ ಆರೋಪವನ್ನು ಎದುರಿಸುತ್ತಿರುವ ಕೋಲಾರ ಶಾಸಕ ವರ್ತೂರು ಪ್ರಕಾಶ್ ಅವರು ಇಂದು ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಿದ್ದಾರೆ.

ಪ್ರಕರಣ ಸಂಬಂಧ ಶಾಸಕ ವರ್ತೂರು ಪ್ರಕಾಶ್ ಅವರು ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, 15 ದಿನಗಳೊಳಗಾಗಿ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಅಲ್ಲದೆ ತನಿಖೆಗೆ ಅಗತ್ಯವಿರುವ ಮಾದರಿ ಧ್ವನಿಯನ್ನು ನೀಡಬೇಕು. ಸಾಕ್ಷಿಗಳ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಒತ್ತಡ ಹೇರಬಾರದು ಎಂದು ಷರತ್ತು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು ಇಂದು ಪೊಲೀಸರನ್ನು ಭೇಟಿ ಮಾಡಿದ್ದಾರೆ.

ಇನ್ನು ಹಾಜರಾದ ಶಾಸಕರಿಂದ ಪೊಲೀಸರು ಮಾದರಿ ಧ್ವನಿ ಮುದ್ರಿಸಿಕೊಂಡಿದ್ದು, ವಿಚಾರಣೆ ಕೆಲ ಹೊತ್ತು ನಡೆಸಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಮಾಧ್ಯಮಗಳು ಪ್ರಕಾಶ್ ಅವರನ್ನು ಪ್ರಶ್ನಿಸಿದಾಗ ಶಾಸಕರು ಪ್ರತಿಕ್ರಿಯಿಸಲು ನಿರಾಕರಿಸಿದರು.  

ಮಾನವ ಹಕ್ಕುಗಳ ಹೋರಾಟಗಾರ ಗಿರೀಶ್ ಗೌಡ ಅವರು ಶಾಸಕರ ನೀಡಿದ್ದ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟಚಾರ ವಿರೋಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಭಾರತೀಯ ದಂಡ ಸಂಹಿತೆ ಕಲಂ 13(1)ಡಿ, 13(2) 506 ಮತ್ತು 511ರ ಅಡಿಯಲ್ಲಿ ದೂರು ದಾಖಲಿಸಿಕೊಂಡಿತ್ತು.

ವೆಬ್ದುನಿಯಾವನ್ನು ಓದಿ