ಬಿಬಿಎಂಪಿ ಚುನಾವಣೆಗೆ ಕಾಲಾವಕಾಶ: ನಾಯಕರ ಅಭಿಪ್ರಾಯ

ಶುಕ್ರವಾರ, 3 ಜುಲೈ 2015 (17:07 IST)
ಬಿಬಿಎಂಪಿ ಚುನಾವಣೆ ಸಂಬಂಧ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, 8 ವಾರಗಳ ಕಾಲ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮತ್ತೆ 2 ತಿಂಗಳ ಕಾಲಾವಕಾಶ ಲಭ್ಯವಾಗಿದ್ದು, ಅಕ್ಟೋಬರ್ 5ರ ಒಳಗೆ ಚುನಾವಣೆ ನಡೆಸಲು ಅವಕಾಶ ದೊರೆತಿದೆ. 
 
ಕೋರ್ಟ್ ಆದೇಶ ಸಂಬಂಧ ರಾಜ್ಯದ ಗಣ್ಯರು ಪ್ರತಿಕ್ರಿಯಿಸಿದ್ದು, ವಿವರ ಈ ಕೆಳಕಂಡಂತಿದೆ. 
 
ಸುಪ್ರೀಂ ಕೋರ್ಟ್ ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ:
ನ್ಯಾಯಾಲದ ಆದೇಶ ಪ್ರತಿ ನಮ್ಮ ಕೈ ಸೇರಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಕೈ ಸೇರಿದ ಬಳಿಕ ಆ ಸಂಬಂಧ ಪ್ರತಿಕ್ರಿಯಿಸುವುದಾಗಿ ಹೇಳಿರುವ ಅವರು, ಮುಂದಿನ ಕ್ರಮದ ಬಗ್ಗೆ ವಕೀಲರೊಂದಿಗೆ ಚರ್ಚಿಸಲಿದ್ದೇನೆ ಎಂದರು.  
 
ವಿಧಾನಸಭಾ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್: ನ್ಯಾಯಾಲಯದ ತೀರ್ಪಿಗೆ ನಾವು ತಲೆ ಬಾಗುತ್ತೇವೆ. ಈಗಾಗಲೇ ಈ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿ 10 ಸಾವಿರ ರೂ. ದಂಡವನ್ನೂ ಹಾಕಿತ್ತು. ಆದರೂ ಕೂಡ ಸರ್ಕಾರ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಸದಸ್ಯರಿಗೆ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಕಾಡುತ್ತಿದೆ. ಆದ್ದರಿಂದಲೇ ಆಡಳಿತ ಪಕ್ಷದ ಸದಸ್ಯರು ಈ ನಾಟಕಗಳನ್ನು ಆಡುತ್ತಿದ್ದಾರೆ. ಈಗಲಾದರೂ ಸರ್ಕಾರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುನ್ನಡೆಯಲಿ ಎಂದು ಕುಟುಕಿದರು. 
 
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ: ಕೋರ್ಟ್ ಸರ್ಕಾರದ ಪರವಾಗಿ ತೀರ್ಪು ಪ್ರಕಟಿಸುವ ಬಗ್ಗೆ ನನಗೆ ಮೊದಲೇ ತಿಳಿದಿತ್ತು. ಸರ್ಕಾರ ಕುತಂತ್ರವನ್ನು ಮಾಡುತ್ತಿದ್ದು, ವಿನಾಕಾರಣ ಅವಕಾಶ ಕೇಳುತ್ತಿದೆ. ಚುನಾವಣೆಯಲ್ಲಿ ಸೋಲುವ ಭಯ ಅವರಲ್ಲಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿಯೇ ಪುನರ್ ವಿಂಗಡಣೆ ಎಂದು ಹೇಳಿಕೊಂಡು ನಾಟಕವಾಡುತ್ತಿದ್ದಾರೆ ಎಂದರು.
 
ಆದೇಶವೇನು ?:
ಸುಪ್ರೀಂ ಮುಖ್ಯ ನ್ಯಾ. ಹೆಚ್.ಎಲ್.ದತ್ತು ಅವರಿರುವ ಏಕ ಸದಸ್ಯ ಪೀಠ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದು, ಬಿಬಿಎಂಪಿ ಚುನಾವಣೆ ನಡೆಸಲು ಕಾಲಾವಕಾಶ ಕೇಳಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್, ಯಾವುದೇ ಬದಲಾವಣೆ ತರದಂತೆ ಸೂಚಿಸಿ 8 ವಾರಗಳ ಕಾಲಾವಕಾಶ ನೀಡಿ ಆದೇಶಿಸಿದೆ. 
 
ಹಿನ್ನೆಲೆ ವಿವರ: ಹಿನ್ನೆಲೆ ವಿವರ: 2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡನೆ ಮಾಡಿ ನೂತನ ಮೀಸಲಾತಿ ಪಟ್ಟಿ ತಯಾರಿಸಿ ಚುನಾವಣೆ ನಡೆಸಲು ಅವಕಾಶ ನೀಡಬೇಕೆಂದು ಕೋರಿ ಸರ್ಕಾರ ಹೈಕೋರ್ಟ್‌ನಲ್ಲಿ ಅರ್ಜಿ ಸ್ಲಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆಗಸ್ಟ್ 5 ರ ಒಳಗೆ 2001ರ ಜನಗಣತಿಯಂತೆಯೇ ಚುನಾವಣೆ ನಡೆಸಲು ಸೂಚಿಸಿ ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರದ ಪರವಾಗಿ ಆದೇಶ ನೀಡಿದೆ.

ವೆಬ್ದುನಿಯಾವನ್ನು ಓದಿ