ಟಿಪ್ಪು ಜಯಂತಿ ವಿರೋಧಿಸಿ ಕೊಡಗಿನಲ್ಲಿ ಬಂದ್, ಗುಂಪು ಘರ್ಷಣೆಯಲ್ಲಿ ಒಬ್ಬರ ಸಾವು

ಮಂಗಳವಾರ, 10 ನವೆಂಬರ್ 2015 (11:25 IST)
ಟಿಪ್ಪು ಜಯಂತಿ ವಿರೋಧಿಸಿ ಕೊಡಗಿನಲ್ಲಿ ಬಂದ್ ಆಚರಣೆ ವೇಳೆ ಎರಡು ಕೋಮುಗಳ ನಡುವೆ ಘರ್ಷಣೆ ಸಂಭವಿಸಿದ್ದರಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಗುಂಪು ಘರ್ಷಣೆಯಲ್ಲಿ ವಿಎಚ್‌ಪಿ ಮುಖಂಡ  ಕುಟ್ಟಪ್ಪ ಎಂಬವರು ತೀವ್ರ ಗಾಯಗಳಿಂದ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.   2 ಗುಂಪುಗಳ ಘರ್ಷಣೆಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಪೊಲೀಸರು ಲಾಠಿ ಪ್ರಹಾರ ಮಾಡಿದ್ದರಿಂದ ಕೆಲವರಿಗೆ ಗಾಯಗಳಾಗಿತ್ತು.

 ವಿಎಚ್‌ಪಿ ಮುಖಂಡ ಕುಟ್ಟಪ್ಪ  ಮತ್ತು ಇನ್ನೂ ಮೂವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ತಲೆಗೆ ತೀವ್ರ ಗಾಯವಾಗಿದ್ದ ಕುಟ್ಟಪ್ಪ ದುರಂತ ಸಾವನ್ನಪ್ಪಿದ್ದು, ಕೊಡಗಿನಲ್ಲಿ  ಉದ್ವಿಗ್ನ ಪರಿಸ್ಥಿತಿ ಮೂಡಿದೆ. ಒಂದು ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಹಿಂಸಾಚಾರ ಸಂಭವಿಸುವ ಸಾಧ್ಯತೆಯಿದೆ. ಪೊಲೀಸರ ನಿರ್ಲಕ್ಷ್ಯದಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದ್ದು ಪೊಲೀಸರು ಮುಂಜಾಗ್ರತಾ ಕ್ರಮ ಮುಂಚೆಯೇ ಕೈಗೊಂಡಿದ್ದರೆ ಇಷ್ಟು ದೊಡ್ಡ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಜನರ ಅಭಿಪ್ರಾಯವಾಗಿದೆ.  ಟಿಪ್ಪು ಜಯಂತಿ ವಿರೋಧಿಸಿ   ಕೊಡಗಿನ ಬಂದ್‌‌ಗೆ ಪರ, ವಿರೋಧ ತೀವ್ರ ಸ್ವರೂಪ ಪಡೆದು ಎರಡು ಕೋಮುಗಳ ನಡುವೆ ಘರ್ಷಣೆಗೆ ನಾಂದಿಯಾಯಿತು.  

ಇವತ್ತು ಟಿಪ್ಪು  ಮೆರವಣಿಗೆ ತಿಮ್ಮಯ್ಯ ಸರ್ಕಲ್‌ಗೆ ಬರುತ್ತಿದ್ದಂತೆ ಒಂದು ಗುಂಪು ಟಿಪ್ಪು ಪರವಾಗಿ ಘೋಷಣೆ ಕೂಗಿದರೆ ಇನ್ನೊಂದು ಗುಂಪು ಟಿಪ್ಪು ವಿರೋಧಿ ಘೋಷಣೆ ಕೂಗತೊಡಗಿತು ಮತ್ತು ಉದ್ರಿಕ್ತ ಜನರು ಪರಸ್ಪರ ಘರ್ಷಣೆಯಲ್ಲಿ ನಿರತರಾದರು. ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಪರಿಸ್ಥಿತಿ ಉದ್ನಿಗ್ನತೆಗೆ ತಲುಪಿತ್ತು. 
 
 ಚಿತ್ರದುರ್ಗದಲ್ಲಿ ಕೂಡ ಟಿಪ್ಪುವಿನ ಜಯಂತಿ ಆಚರಿಸಬಾರದು ಎಂದು ವಿಹಿಂಪ ಮತ್ತು ಬಿಜೆಪಿ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿ ಟಿಪ್ಪು ಜಯಂತಿ ಆಚರಣೆ ವಿರುದ್ಧ ಪ್ರತಿಭಟಿಸಿದರು. ಮದಕರಿನಾಯಕನನ್ನು ಟಿಪ್ಪು ವಿಷಪ್ರಾಶನ ಮಾಡಿಸಿ ಕೊಂದಿರುವ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ ಆಚರಿಸುವುದಕ್ಕೆ ಚಿತ್ರದುರ್ಗದ ಜನರು ವಿರೋಧ ಸೂಚಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ