ಪಂಚಾಯತ್ ಚುನಾವಣೆ: ಎರಡನೇ ಹಂತದ ಮತದಾನ ಆರಂಭ

ಶನಿವಾರ, 20 ಫೆಬ್ರವರಿ 2016 (10:46 IST)
ಎರಡನೇ ಹಂತದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಇಂದು ನಡೆಯುತ್ತಿದ್ದು ಈಗಾಗಲೇ ಮತದಾನ ಆರಂಭವಾಗಿದೆ.
 
ಹದಿನೈದು ಜಿಲ್ಲಾ ಪಂಚಾಯಿತಿ ಹಾಗೂ ಅದರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ರಿಂದ ಮತದಾನ ಆರಂಭವಾಗಿದ್ದು ಸಂಜೆ 5 ರವರೆಗೆ ಮತದಾನ ನಡೆಯಲಿದೆ.
 
ಮಂಡ್ಯ, ಹಾಸನ, ಮೈಸೂರು, ಕೊಡಗು, ಚಾಮರಾಜನಗರ, ಬಳ್ಳಾರಿ, ಕೊಪ್ಪಳ, ಕಲಬುರಗಿ, ರಾಯಚೂರು, ವಿಜಯಪುರ, ಬೀದರ್‌, ಯಾದಗಿರಿ, ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಸೇರಿ 15 ಜಿಲ್ಲೆಗಳಲ್ಲಿ ಇಂದು ಮತದಾನ ನಡೆಯುತ್ತಿದೆ. 530 ಜಿಲ್ಲಾ ಪಂಚಾಯತ್ ಕ್ಷೇತ್ರಗಳು, 1936 ತಾಲ್ಲೂಕು ಪಂಚಾಯತಿ ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಶಾಂತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 
 
ಹದಿನೈದು ಜಿಲ್ಲಾ ಪಂಚಾಯಿತಿಯ 530 ಕ್ಷೇತ್ರಗಳು ಹಾಗೂ 80 ತಾಲೂಕು ಪಂಚಾಯಿತಿಯ 1936 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 8616 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
 
ಒಟ್ಟು 1,42,74,895 ಮತದಾರರು ಮತದಾನದ ಹಕ್ಕು ಪಡೆದಿದ್ದು, ಇದೇ ಮೊದಲ ಬಾರಿಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ವಿದ್ಯುನ್ಮಾನ ಯಂತ್ರದಲ್ಲಿ ನೋಟಾ ಅವಕಾಶ ಕಲ್ಪಿಸಲಾಗಿದೆ.
 
ಮೊದಲ ಹಂತದ ಚುನಾವಣೆ ಫೆಬ್ರವರಿ 13 ರಂದು ನಡೆದಿತ್ತು. ಎರಡೂ ಹಂತದ ಚುನಾವಣೆಯ ಮತ ಎಣಿಕೆ ಫೆಬ್ರವರಿ 23 ರಂದು ನಡೆಯಲಿದೆ. 

ವೆಬ್ದುನಿಯಾವನ್ನು ಓದಿ