ಇಂದು ಹಾವೇರಿಯ ಮತ್ತೋರ್ವ ರೈತ ಆತ್ಮಹತ್ಯೆಗೆ ಶರಣು

ಶುಕ್ರವಾರ, 3 ಜುಲೈ 2015 (18:00 IST)
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಇಂದು ಜಿಲ್ಲೆಯಲ್ಲಿ ಮತ್ತೋರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. 
 
ಮೃತ ರೈತನನ್ನು ಮಾರುತಪ್ಪ ಮಕರಿ(55) ಎಂದು ಹೇಳಲಾಗಿದ್ದು, ಜಿಲ್ಲೆಯ ಹಿರೇಕೆರೂರು ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿದ್ದಾನೆ. 
 
ಈತ 3 ಎಕರೆ ಜಮೀನು ಹೊಂದಿದ್ದು, ಮೆಕ್ಕೆ ಜೋಳ ಹಾಗೂ ಹತ್ತಿ ಬೆಳೆಯುತ್ತಿದ್ದ ಎನ್ನಲಾಗಿದ್ದು, ಬೆಳೆಯಲ್ಲಿ ನಷ್ಟ ಅನುಭವಿಸಿದ್ದ. ಅಲ್ಲದೆ ಬೆಳೆಗಾಗಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಆದ್ದರಿಂದ ಬ್ಯಾಂಕ್ ಸಿಬ್ಬಂದಿ ನೋಟಿಸ್ ಜಾರಿಗೊಳಿಸಿದ್ದರು ಎನ್ನಲಾಗಿದ್ದು, ಇದರಿಂದ ಮನನೊಂದ ಗ್ರಾಮದ ಹೊರ ವಲಯದಲ್ಲಿ ಹರಿಯುವ ಕುಮಧ್ವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. 
 
ಪ್ರಕರಣದ ಹಿನ್ನೆಲೆ: ಈತ ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದ ಎನ್ನಲಾಗಿದ್ದು, ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಆದ್ದರಿಂದ ಇಂದು ಬೆಳಗ್ಗೆ ನದಿಯ ದಡದಲ್ಲಿ ಮೃತ ದೇಹ ಪತ್ತೆಯಾಗಿದೆ. ದೇಹವನ್ನು ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. 
 
ಇನ್ನು ಘಟನೆ ತಿಳಿದ ಹಿರೆಕೆರೂರು ಪೊಲೀಸರು ಸ್ಥಳಕ್ಕಾಗಮಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
 
ಇದರೊಂದಿಗೆ ಕಳೆದ ಜೂನ್ 8ರಿಂದ ಇಲ್ಲಿಯವರೆಗೆ ರಾಜ್ಯಾದ್ಯಂತ 11 ಮಂದಿ ರೈತರು ಸಾಲಬಾಧೆಯಿಂದ ಸಾವಿಗೆ ಶರಣಾಗಿದ್ದು, ಮಂಡ್ಯ ಜಿಲ್ಲೆವೊಂದರಲ್ಲಿಯೇ 5 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ