ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ನಾಳೆ ರಾಷ್ಟ್ರವ್ಯಾಪಿ ಬಂದ್

ಮಂಗಳವಾರ, 1 ಸೆಪ್ಟಂಬರ್ 2015 (13:58 IST)
ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ನಾಳೆ ರಾಷ್ಟ್ರವ್ಯಾಪಿ ಬಂದ್ ಘೋಷಿಸಲಾಗಿದ್ದು, ನಾಳೆ ಬೆಳಗ್ಗೆ 6ರಿಂದ ಸಂಜೆ 6 ವರೆಗೆ ಬಂದ್ ನಡೆಸಲಾಗುತ್ತಿದೆ.   
 
ಸಿಐಟಿಯು ಸಂಘಟನೆ ಸೇರಿದಂತೆ ರಾಷ್ಟ್ರ ಮಟ್ಟದ 10ಕ್ಕೂ ಹೆಚ್ಚು ಸಂಘಟನೆಗಳು ಈ ಬಂದ್‌ಗೆ ಕರೆ ನೀಡಿದ್ದು, ಹಲವು ಬೇಡಿಕೆಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಈಡೇರಿಸುವಂತೆ ಮನವಿ ಮಾಡಲಿವೆ ಎಂದು ಸಂಘಟನೆಗಳ ಮೂಲಗಳು ತಿಳಿಸಿವೆ.
 
ಬಂದ್ ಹಿನ್ನೆಲೆಯಲ್ಲಿ ಆಟೋ ಸೇರಿದಂತೆ ಸರ್ಕಾರಿ ಸಾರಿಗೆ, ಅಂಚೆ ಕಚೇರಿ, ಬ್ಯಾಂಕ್, ಸಾರ್ವಜನಿಕ ಉದ್ದಿಮೆಗಳಾದ ಬಿಇಎಲ್, ಹೆಚ್ಎಎಲ್ ಹಾಗೂ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 
 
ಇನ್ನು ಖಾಸಗಿ ಬಸ್, ಟ್ಯಾಕ್ಸಿ, ಆಸ್ಪತ್ರೆ, ಅಂಬುಲನ್ಸ್, ಮೆಡಿಕಲ್ ಹಾಗೂ ಎಟಿಎಂ ಸೇವೆ ಸೇರಿಂದತೆ ದಿನನಿತ್ಯದ ಅಗತ್ಯ ಸೇವೆಗಳು ನಾಳೆಯೂ ಕೂಡ ಲಭ್ಯವಿದ್ದು, ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆದಿರಲಿವೆ. 
 
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಬೆಲೆ ಕಡಿತಗೊಳಿಸಬೇಕು, ರೈಲ್ವೇ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ವಿದೇಶಿ ಹೂಡಿಕೆಗೆ ಹೆಚ್ಚುತ್ತಿದ್ದು ಅದನ್ನೂ ನಿಯಂತ್ರಿಸಬೇಕು, ಜೊತೆಗೆ ಕಾರ್ಮಿಕರಿಗೆ ಕನಿಷ್ಟ 15 ಸಾವಿರ ವೇತನ ನೀಡುವಂತೆ ಕಾರ್ಮಿಕ ಕಾಯಿದೆಗೆ ತಿದ್ದುಪಡಿ ತರಬೇಕೆಂದು ಕೇಂದ್ರವನ್ನು ಒತ್ತಾಯಿಸಲು ಬಂದ್‌ಗೆ ಕರೆ ನೀಡಲಾಗಿದೆ. 

ವೆಬ್ದುನಿಯಾವನ್ನು ಓದಿ