ಸುಗ್ರೀವಾಜ್ಞೆ ಉಲ್ಲಂಘಿಸಿ ಗುತ್ತಿಗೆ ನವೀಕರಣ: ಸಿಎಂಗೆ ಮತ್ತೊಂದು ಕಂಟಕ

ಗುರುವಾರ, 19 ಫೆಬ್ರವರಿ 2015 (14:05 IST)
ಅರ್ಕಾವತಿ ಬಡಾವಣೆಯಲ್ಲಿ ಅಕ್ರಮವಾಗಿ ಡಿ ನೋಟಿಫಿಕೇಶನ್ ಮಾಡಿದ್ದಾರೆ ಎಂಬ ಆರೋಪ ಹಸಿರಾಗಿರುವಾಗಲೇ ಸಿಎಂ ಸಿದ್ದರಾಮಯ್ಯನವರು ಮತ್ತೊಂದು ಪ್ರಕರಣದ ಸುಳಿಯಲ್ಲಿ ಸಿಲುಕಿದ್ದು, ಕೇಂದ್ರ ಸರ್ಕಾರ ಗಣಿಗಾರಿಕೆಗೆ ಸಂಬಂಧಿಸಿದಂತೆ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಉಲ್ಲಂಘಿಸಿ 8 ಮೈನಿಂಗ್ ಕಂಪನಿಗಳ ಗುತ್ತಿಗೆಯನ್ನು ಮರು ನವೀಕರಣ ಮಾಡಿರುವ ಆರೋಪ ಎದುರಾಗಿದೆ. 
 
ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರು 8 ಗಣಿ ಕಂಪನಿಗಳ ಗುತ್ತಿಗೆಯನ್ನು ಮರುನವೀಕರಣ ಮಾಡಿಕೊಟ್ಟಿದ್ದು, ಭಾರೀ ಗೋಲ್ ಮಾಲ್ ನಡೆದಿದೆ ಎನ್ನಲಾಗುತ್ತಿದೆ. ಇನ್ನು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿ ಸಫಲವಾದ ಕಂಪನಿಗಳೆಂದರೆ ಸೆಸ್ಸಾ ಸ್ಟೆರ್ ಲೈಟ್, ಉಪೇಂದ್ರನ್ ಮೈನಿಂಗ್ ಕಂಪನಿ, ತುಮಕೂರು ಮಿನರಲ್ಸ್ ಪ್ರೈ ಲಿ., ವೀರಭದ್ರಪ್ಪ ಅಂಡ್ ಸಂಗಪ್ಪ ಕೋ ಲಿ., ರಾಮಗಢ್ ಮಿನರಲ್ ಮೈನಿಂಗ್ ಲಿಮಿಟೆಡ್ ಸೇರಿದಂತೆ ಇನ್ನಿತರೆ ಕಂಪನಿಗಳಾಗಿವೆ.  
 
ಆರೋಪವೇನು?: ಇನ್ನು ಮುಂದೆ ಗಣಿಗಳಲ್ಲಿನ ಖನಿಜ ಸಂಪತ್ತನ್ನು ಗುತ್ತಿಗೆ ನೀಡದೆ ಹರಾಜು ಹಾಕಬೇಕು ಎಂದು ಕೇಂದ್ರ ಸರ್ಕಾರವು ಮೈನ್ಸ್ ಅಂಡ್ ಮಿನರಲ್ಸ್ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಜ.12ರಂದು ಸುಗ್ರೀವಾಜ್ಞೆ ಹೋರಡಿಸಿತ್ತು. ಆದರೆ ಸರ್ಕಾರದ ಸುಗ್ರೀವಾಜ್ಞೆಯನ್ನು ಉಲ್ಲಂಘಿಸಿರುವ ಸಿಎಂ ಸಿದ್ದರಾಮಯ್ಯ, ಅದೇ ದಿನ 8 ಗಣಿ ಕಂಪನಿಗಳ ಗುತ್ತಿಗೆಯ ಅವಧಿಯನ್ನು ಮರು ನವೀಕರಣ ಮಾಡಿಕೊಟ್ಟಿದ್ದಾರೆ. ಇದು ಪ್ರಸ್ತುತ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿ ಬರುತ್ತಿರುವ ಆರೋಪವಾಗಿದ್ದು, ಸರ್ಕಾರಕ್ಕೆ ಬಹುಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದೆ.  
 
ಇಲ್ಲಿನ ಮತ್ತೊಂದು ಆರೋಪವೆಂದರೆ... ರಾಜ್ಯ ಸರ್ಕಾರವು ಹಿಂದಿನ ನೀತಿಯನ್ನೇ ಮುಂದುವರಿಸುವುದಾದರೆ ಕೇಂದ್ರ ಸರ್ಕಾರದ ಈ ಮೈನಿಂಗ್ ತಿದ್ದುಪಡಿ ಕಾಯಿದೆಗೆ ಒಪ್ಪಿಗೆ ಏಕೆ ಸೂಚಿಸಬೇಕಿತ್ತು ಎಂಬುದಾಗಿದೆ. ಕೇಂದ್ರ ಸರ್ಕಾರವು ಕಾಯಿದೆಗೆ ತಿದ್ದುಪಡಿ ತರುವ ಮೊದಲು ರಾಷ್ಟ್ರದ ಎಲ್ಲಾ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರುವ ಮೂಲಕ ಅಭಿಪ್ರಾಯ ಪಡೆದಿತ್ತು. ತಿದ್ದುಪಡಿಗೆ ಒಪ್ಪಿಗೆ ಬಂದ ಬಳಿಕವಷ್ಟೇ ತಿದ್ದುಪಡಿ ಮಾಡಿತ್ತು. ಆದ್ದರಿಂದ ಕೇಂದ್ರದ ಈ ನಿರ್ಧಾರಕ್ಕೆ ಕರ್ನಾಟಕ ಸರ್ಕಾರ ಕೂಡ ಒಪ್ಪಿಗೆ ನೀಡಿತ್ತು. ಇಷ್ಟಾದರೂ ಸರ್ಕಾರ ಹರಾಜು ಹಾಕದೆ ಕಂಪನಿಗಳಿಗೆ ಗುತ್ತಿಗೆಯ ಅವಧಿಯನ್ನು ಮರುನವೀಕರಣ ಮಾಡಿಕೊಡಲಾಗಿದೆ. ಈ ವಿಚಾರದಲ್ಲಿ ಕೇಂದ್ರದ ನಿರ್ದಾರಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದ್ದೇಕೆ ಎಂಬುದು ಪ್ರಕರಣದ ಮತ್ತೊಂದು ಯಕ್ಷ ಪ್ರಶ್ನೆ.  
 
ಸಿದ್ದರಾಮಯ್ಯನವರ ಈ ಕಾರ್ಯ ವೈಖರಿ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯನವರಿಗೆ ಲಾಭದಾಯಕವೇ ಹೊರತು ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟವಾಗಿದೆ ಎಂಬ ಅಭಿಪ್ರಾಯ ಪ್ರಸ್ತುತ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.  

ವೆಬ್ದುನಿಯಾವನ್ನು ಓದಿ