ಬಸ್ ಪ್ರಯಾಣ ದರದಲ್ಲಿ ಗಣನೀಯ ಇಳಿಕೆ ಸಾಧ್ಯತೆ!

ಬುಧವಾರ, 17 ಡಿಸೆಂಬರ್ 2014 (09:19 IST)
ಡೀಸೆಲ್ ಬೆಲೆಯಲ್ಲಿ ಗಣನೀಯ ಕಡಿತವಾದ ಹಿನ್ನೆಲೆಯಲ್ಲಿ  ಸರಕಾರ ಬಸ್ ಪ್ರಯಾಣ ದರಗಳನ್ನು ಸಹ ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು  ಮಾಹಿತಿ ಲಭಿಸಿದೆ.
ಮೂಲಗಳ ಪ್ರಕಾರ, ಬಸ್ ಪ್ರಯಾಣ ದರಗಳಲ್ಲಿ ಪ್ರತಿಶತ 8ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಬುಧವಾರ ಬೆಳಗಾವಿ ಅಧಿವೇಶನದ ವೇಳೆ ಸದನದಲ್ಲೇ ಈ ಇಳಿಕೆಯನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.
 
ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಎಷ್ಟು ಇಳಿಕೆ ಮಾಡಬಹುದು ಎನ್ನುವುದರ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಪ್ರಯಾಣ ದರ ಇಳಿಸುವ ಬೇಡಿಕೆಯನ್ನು ಸೋಮವಾರ ವಿಧಾನ ಪರಿಷತ್‌‌ನಲ್ಲಿ ಸಿ.ಎಂ ಸಿದ್ದರಾಮಯ್ಯ, ಸಚಿವ ರಾಮಲಿಂಗಾ ರೆಡ್ಡಿ ತಳ್ಳಿ ಹಾಕಿದ್ದರು.
 
ಹಲವು ತಿಂಗಳಿನಿಂದ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಸತತವಾಗಿ ಇಳಿಕೆಯಾಗುತ್ತಿದ್ದರೂ ರಾಜ್ಯದಲ್ಲಿ ಬಸ್ ಪ್ರಯಾಣವನ್ನು ತಗ್ಗಿಸಲಾಗಿಲ್ಲ ಎಂಬ ಕೂಗು ರಾಜ್ಯಾದ್ಯಂತ ಕೇಳಿಬಂದಿತ್ತು. ವಿರೋಧ ಪಕ್ಷಗಳು ಕೂಡ ವಿಧಾನಸಭೆಯಲ್ಲಿ ಈ ಕುರಿತು ಧ್ವನಿ ಎತ್ತಿದ್ದವು. ಇದರಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಇರಿಸುಮುರುಸಾಗಿತ್ತು.

ವೆಬ್ದುನಿಯಾವನ್ನು ಓದಿ