ಎರಡು ಕುಟುಂಬಗಳ ನಡುವೆ ಮಾರಾಮಾರಿ: ಆಸ್ಪತ್ರೆಗೆ ದಾಖಲು

ಗುರುವಾರ, 28 ಮೇ 2015 (16:25 IST)
ಹಳೇ ದ್ವೇಷ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದ ಪರಿಣಾಮ ಎರಡೂ ಕುಟುಂಬಗಳ ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹಳೇಹುಬ್ಬಳ್ಳಿಯ ಕೃಷ್ಣಾಪುರ ಓಣಿಯಲ್ಲಿ ನಡೆದಿದೆ.  
 
ಸಂಘರ್ಷಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲವಾದರೂ ಹಳೆಯ ದ್ವೇಷವೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಘಟನೆಯು ಮಹಾನಗರ ಪಾಲಿಕೆ ಸದಸ್ಯ ದಶರಥ ವಾಲಿ ಮತ್ತು ಯಲ್ಲವ್ವ ಅಂಚಿಟಗೇರಿ ಎಂಬುವವರ ಕುಟುಂಬಸ್ಥರ ನಡುವೆ ನಡೆದಿದೆ. 
 
ಘಟನೆ ವಿವರ: ಹಳೇ ದ್ವೇಷ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಏಕಾಏಕಿ ಒಬ್ಬರ ಮೇಲೊಬ್ಬರು ಎರಗಿದ್ದು, ಜಗಳ ತಾರಕ್ಕೇರಿದೆ. ಈ ವೇಳೆ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿಕೊಂಡಿದ್ದಾರೆ. ಪರಿಣಾಮ ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಎಲ್ಲರ ಸ್ಥಿತಿಯೂ ಚಿಂತಾಜನಕವಾಗಿದೆ. ಗಾಯಾಳುಗಳನ್ನು ನಗರದ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. 
 
ಇನ್ನು ಘಟನಾ ಸ್ಥಳಕ್ಕೆ ಜಿಲ್ಲಾ ಡಿಸಿಪಿ ಹನುಮಂತರಾಯ ಅವರು ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ನಗರದ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ