ಜೋಡಿ ಕೊಲೆ ಪ್ರಕರಣ: ಜೆಡಿಎಸ್ ಕಾರ್ಪೋರೇಟರ್‌ಗೆ ಜೀವಾವಧಿ ಶಿಕ್ಷೆ

ಶುಕ್ರವಾರ, 26 ಫೆಬ್ರವರಿ 2016 (16:19 IST)
2008ರಲ್ಲಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಪಾಲಿಕೆ ಜೆಡಿಎಸ್ ಸದಸ್ಯ ಜೀವಾ ಮಾದೇಶ್ ಅಲಿಯಾಸ್ ಅವ್ವ ಮಾದೇಶ ಸೇರಿದಂತೆ ಎಂಟು ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 
 
ಕಳೆದ 2008 ಮೇ 15 ರಂದು ಮೈಸೂರು ಜಿಲ್ಲೆಯ ಹುಣಸೂರು ಬೈಪಾಸ್ ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ಗೆ ನುಗ್ಗಿದ ಆರೋಪಿಗಳು ರಾಜೇಶ್ ಮತ್ತು ರಾಮು ಎನ್ನುವವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಅವರ ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 
ಜೆಡಿಎಸ್ ಕಾರ್ಪೋರೇಟರ್ ಮಾದೇಶನಿಗೆ ಜೀವಾವಧಿ ಶಿಕ್ಷೆ ಮತ್ತು 3 ಲಕ್ಷ ದಂಡ ವಿಧಿಸಲಾಗಿದೆ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ 1 ಲಕ್ಷ ರೂ. ದಂಡ ವಿಧಿಸಿ ಮೈಸೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
 
ಮತ್ತೊಬ್ಬ ಆರೋಪಿಯನ್ನು ಸಾಕ್ಷಿಯಾಗಿ ಪರಿಗಣಿಸಿ ಬಿಡುಗಡೆ ಮಾಡಲಾಗಿದೆ. ಆರೋಪಿಗಳ ದಂಡದ ಹಣವನ್ನು ಹತ್ಯೆಯಾದವರ ಕುಟುಂಬಕ್ಕೆ ನೀಡುವಂತೆ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.
 
ಭಾರಿ ಕುತೂಹಲ ಕೆರಳಿಸಿದ್ದ ಜೋಡಿ ಹತ್ಯೆ ಪ್ರಕರಣದ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆಯುತ್ತಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಕೋರ್ಟ್‌ಗೆ ಆಗಮಿಸಿದ್ದರು. 

ವೆಬ್ದುನಿಯಾವನ್ನು ಓದಿ