ಟ್ವಿಟ್ಟರ್: ಭ್ರಷ್ಟ ಪೊಲೀಸರ ವಿರುದ್ಧ ದೂರಿಗೆ ಸಾರ್ವಜನಿಕರ ಅಸ್ತ್ರ

ಶುಕ್ರವಾರ, 19 ಸೆಪ್ಟಂಬರ್ 2014 (18:27 IST)
ಪೊಲೀಸ್ ಇಲಾಖೆಯಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಲಂಚಾವತಾರಕ್ಕೆ  ಪೂರ್ಣವಿರಾಮ ಹಾಕಲು ಹೊಸ ಪೊಲೀಸ್ ಆಯುಕ್ತರು ನಿರ್ಧರಿಸಿದಂತಿದೆ. ಒಂದೇ ದಿನದಲ್ಲಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಮೂವರನ್ನು ಅಮಾನತುಗೊಳಿಸಿ ಇಬ್ಬರನ್ನು ಬಂಧಿಸಿರುವುದು ಇದಕ್ಕೆ ಸಾಕ್ಷಿಯೊದಗಿಸಿದೆ.

ಸಾಮಾನ್ಯವಾಗಿ ಲಂಚ ಪಡೆದ ಬಗ್ಗೆ ದೂರುಗಳನ್ನು ನೀಡಲು ಜನರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದರೆ ಯಾವುದೇ ಪ್ರಯೋಜನವಿಲ್ಲವೆಂದು ಭಾವಿಸಿದಂತಿದ್ದು ಟ್ವಿಟ್ಟರ್ ಮೊರೆ ಹೋಗುತ್ತಿದ್ದಾರೆ. ಟ್ವಿಟ್ಟರ್‌ನಲ್ಲಿ ಪೊಲೀಸರು ಲಂಚ ಪಡೆದ ಪ್ರಸಂಗಗಳನ್ನು ಅಪ್‌ಲೋಡ್ ಮಾಡಿದ ಕೂಡಲೇ ಆಯುಕ್ತ ಎಂ.ಎನ್. ರೆಡ್ಡಿ ತಕ್ಷಣವೇ ಕ್ರಮಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಪೊಲೀಸರಿಗೆ ಮೈನಡುಕು ಷುರುವಾಗಿದೆ.

 ಚಿಕ್ಕಜಾಲ ಠಾಣೆಯ ಪೇದೆಗಳಾದ ಅಂಕಿತ್ , ಪ್ರಕಾಶ್ ಅವರನ್ನು ಆಯುಕ್ತರು ಅಮಾನತುಗೊಳಿಸಿದ್ದಾರೆ. ಅರ್ಜಿದಾರರು ಟ್ವಿಟ್ಟರ್‌ನಲ್ಲಿ ದೂರು ನೀಡಿ ಪಾಸ್‌ಪೋರ್ಟ್ ಪರಿಶೀಲನೆಗೆ ಪೇದೆಗಳು ಹಣ ಕೇಳಿದ್ದಾಗಿ ತಿಳಿಸಿದ್ದರು.  ಬೆಳಿಗ್ಗೆ ಟೆಕ್ಕಿ ದಂಪತಿಯೊಬ್ಬರಿಂದ ಹಣ ಕಿತ್ತಿದ್ದ ಇಬ್ಬರು ಪೇದೆಗಳಾದ ಶ್ರೀಧರ್, ನರಸಿಂಹ ಎಂಬಿಬ್ಬರನ್ನು ಬಂಧಿಸಲಾಗಿದ್ದು, ಮಡಿವಾಳ ಠಾಣೆಯ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ ಅಮಾನತುಗೊಳಿಸಲಾಗಿತ್ತು. ಟ್ವಿಟ್ಟರ್‌ನಲ್ಲಿ ಪೇದೆಗಳು ಲಂಚ ಪಡೆದ ಬಗ್ಗೆ  ಟೆಕ್ಕಿ ಅಪ್‌ಲೋಡ್ ಮಾಡಿದ ಕೂಡಲೇ ಪೇದೆಗಳನ್ನು ಬಂಧಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ